ಚಳಿಗಾಲ ಶುರುವಾಗಿದೆ. ಚಳಿಗಾಲದಲ್ಲಿ ಚರ್ಮದ ಸಂರಕ್ಷಣೆಯ ಜೊತೆಗೆ ಆರೋಗ್ಯದ ಕಡೆಗೂ ಲಕ್ಷ್ಯವಹಿಸಬೇಕು. ಅದರಲ್ಲೂ ಫಿಟ್ ನೆಸ್ ಕಾಪಾಡಿಕೊಳ್ಳಲು ಡಯಟ್ ಮೊರೆ ಹೋದವರಿಗಂತೂ ಯಾವ ರೀತಿಯ ಆಹಾರವನ್ನು ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂದು ಗೊಂದಲವುಂಟಾಗುತ್ತದೆ.
ಚಳಿಗಾಲದಲ್ಲಿ ಈ ಕೆಳಗಿನ ಕೆಲವು ಆಹಾರವನ್ನು ಸೇವಿಸಿದಲ್ಲಿ ಅವು ಶರೀರವನ್ನು ಬೆಚ್ಚಗಿಡುವುದಲ್ಲದೇ, ಸೌಂದರ್ಯವನ್ನು ಕಾಪಾಡಿ ಆರೋಗ್ಯವನ್ನೂ ಚೆನ್ನಾಗಿಡುತ್ತವೆ.
ಗಸಗಸೆ ಬೀಜ: ಗಸಗಸೆಬೀಜ ತುಂಬ ಪೌಷ್ಠಿಕ ಆಹಾರವಾಗಿದೆ. ಇದು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಇದನ್ನು ಖೀರ್ ರೂಪದಲ್ಲಿ ಅಥವಾ ಹಲ್ವಾ ತಯಾರಿಸಿ ಸೇವಿಸಬಹುದು. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.
ಅಕ್ರೊಟ್: ಅಕ್ರೊಟ್ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಇದರಲ್ಲಿ ಫೈಬರ್, ವಿಟಮಿನ್ ಮತ್ತು ಪ್ರೊಟೀನ್ ಇರುವುದರಿಂದ ಇದನ್ನು ಡಯಟ್ ನಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.
ಎಳ್ಳು ಬೆಲ್ಲದ ಉಂಡೆ: ಬೆಲ್ಲದಲ್ಲಿ ಕಬ್ಬಿಣಾಂಶ ಮತ್ತು ರಂಜಕ ಇರುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಮ್ ಮತ್ತು ಫ್ಯಾಟ್ ಇರುತ್ತದೆ. ಇದು ದೇಹದ ಉಷ್ಣತೆಯನ್ನು ಕೂಡ ಕಾಪಾಡುತ್ತದೆ.
ಹಾಲು: ಚಳಿಗಾಲ ಆರಂಭವಾಗುತ್ತಿದ್ದಂತೆ ಕೇಸರಿ ಹಾಲು, ಅರಿಶಿನದ ಹಾಲು ಅಥವಾ ಖರ್ಜೂರದ ಹಾಲನ್ನು ಡಯಟ್ ನಲ್ಲಿ ಅಳವಡಿಸಿಕೊಂಡಲ್ಲಿ ಇವು ಶೀತ, ಕೆಮ್ಮು ಮುಂತಾದವುಗಳಿಂದ ರಕ್ಷಣೆ ಒದಗಿಸುತ್ತವೆ. ದೇಹದ ಉಷ್ಣತೆಯನ್ನು ಕೂಡ ಹೆಚ್ಚಿಸುತ್ತವೆ.