ಜಂಕ್ ಫುಡ್ ಅನ್ನೋದು ನಿಮ್ಮ ಪುರುಷತ್ವಕ್ಕೂ ಕುತ್ತು ತರುತ್ತದೆ ಅಂದ್ರೆ ನಂಬಲೇಬೇಕು. ಹಣ್ಣು, ತರಕಾರಿ, ಮೀನು, ಚಿಕನ್ ಸೇರಿದಂತೆ ಆರೋಗ್ಯಕರ ಆಹಾರ ಸೇವಿಸುವ ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಹೆಚ್ಚಾಗಿರುತ್ತದೆ.
ಆದ್ರೆ ರೆಡ್ ಮೀಟ್, ಕರಿದ ಪದಾರ್ಥಗಳು, ಸಕ್ಕರೆ, ಸಿಹಿಯಾದ ಪಾನೀಯ, ಸಿಹಿತಿಂಡಿ ಸೇವಿಸುವ ಪುರುಷರಲ್ಲಿ ವೀರ್ಯಾಣು ಕಡಿಮೆ ಇರುತ್ತದೆ. ಸದ್ಯದಲ್ಲೇ ಮಗುವನ್ನು ಪಡೆಯಲು ನೀವೇನಾದ್ರೂ ಪ್ಲಾನ್ ಮಾಡ್ತಾ ಇದ್ರೆ ನಿಮ್ಮ ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸಬಲ್ಲ ಈ ಸೂಪರ್ ಫುಡ್ ಗಳನ್ನೇ ಸೇವಿಸಿ.
ಮೊಟ್ಟೆ : ಪ್ರೋಟೀನ್ ಮತ್ತು ವಿಟಮಿನ್ ಇ ಇದರಲ್ಲಿ ಹೇರಳವಾಗಿದೆ. ಇದು ವೀರ್ಯ ಚಲನಶೀಲತೆಯನ್ನು ಸುಧಾರಿಸುತ್ತದೆ, ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಹಾಗಂತ ಮೊಟ್ಟೆಯನ್ನು ಅತಿಯಾಗಿ ತಿನ್ನುವಂತಿಲ್ಲ, ತಜ್ಞರು ಶಿಫಾರಸು ಮಾಡಿದ ಪ್ರಮಾಣದಲ್ಲಿ ತಿನ್ನಲು ಪ್ರಯತ್ನಿಸಿ.
ಅಸ್ಪರಾಗಸ್ : ಇದು ವೀರ್ಯದ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಸಿ ಯನ್ನು ಹೊಂದಿರುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ವೀರ್ಯದ ಸಂಖ್ಯೆಯನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದು.
ಬೆರ್ರಿ ಹಣ್ಣುಗಳು: ಸ್ಟ್ರಾಬೆರಿ, ಬ್ಲಾಕ್ ಬೆರ್ರಿ, ರಾಸ್ ಬೆರ್ರಿ ಮತ್ತು ಕ್ರಾನ್ ಬೆರ್ರಿ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಇವುಗಳ ಸೇವನೆಯಿಂದ ಆರೋಗ್ಯಕರ ಮತ್ತು ಬಲವಾದ ವೀರ್ಯ ಉತ್ಪಾದನೆಯಾಗುತ್ತದೆ.
ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್, ವಿಟಮಿನ್ ಬಿ 1 ಮತ್ತು ಸಿ ಸಮೃದ್ಧವಾಗಿರುವ ಕಾರಣ ಇದನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳಿ. ಬಾಳೆಹಣ್ಣು ಬ್ರೋಮೆಲೈನ್ ಎಂಬ ಕಿಣ್ವವನ್ನು ಹೊಂದಿರುತ್ತದೆ. ಅದು ವೀರ್ಯ ಚಲನಶೀಲತೆಗೆ ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪು : ಇದರಲ್ಲಿ ಫಾಲಿಕ್ ಆಸಿಡ್ ಹೇರಳವಾಗಿದೆ. ಪಾಲಕ್ ಸೊಪ್ಪನ್ನು ತಿನ್ನುವುದರಿಂದ ವೀರ್ಯ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬಹುದು.
ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ ಕಂಡುಬರುವ ಸೆಲೆನಿಯಮ್ ಎಂಬ ಕಿಣ್ವವು ವೀರ್ಯ ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ದಾಳಿಂಬೆ : ದಾಳಿಂಬೆ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ರಕ್ತದ ಹರಿವಿನಲ್ಲಿರುವ ಸ್ವತಂತ್ರ ರಾಡಿಕಲ್‌ಗಳನ್ನು ನಿವಾರಿಸುತ್ತದೆ ಮತ್ತು ವೀರ್ಯವನ್ನು ಹಾನಿಗೊಳಗಾಗದಂತೆ ರಕ್ಷಿಸುತ್ತವೆ.
ಟೊಮ್ಯಾಟೋ : ವಿಟಮಿನ್ ಸಿ ಮತ್ತು ಲೈಕೋಪೀನ್‌ನಿಂದ ತುಂಬಿರುವ ಟೊಮ್ಯಾಟೋ ಹಣ್ಣುಗಳ ಸೇವನೆಯಿಂದ ವೀರ್ಯ ಸಂಖ್ಯೆ ಸುಧಾರಿಸುತ್ತದೆ.
ಡಾರ್ಕ್ ಚಾಕಲೇಟ್: ಡಾರ್ಕ್ ಚಾಕಲೇಟ್ , ಎಲ್-ಅರ್ಜಿನೈನ್ ಎಂಬ ಕಿಣ್ವವನ್ನು ಹೊಂದಿದ್ದು ಅದು ವೀರ್ಯದ ಪ್ರಮಾಣವನ್ನು ಸುಧಾರಿಸುತ್ತದೆ. ಸಕ್ಕರೆಯ ಸಿಹಿ ತಿನಿಸುಗಳ ಬದಲು ಡಾರ್ಕ್ ಚಾಕಲೇಟ್ ಸೇವಿಸಿ.
ಕುಂಬಳಕಾಯಿ ಬೀಜಗಳು: ಇವು ನಿಮ್ಮ ಸಂತಾನೋತ್ಪತ್ತಿ ಆರೋಗ್ಯಕ್ಕೆ ಅನುಕೂಲಕರವಾಗಿವೆ. ಕುಂಬಳಕಾಯಿ ಬೀಜಗಳು ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಇವು ಫೈಟೊಸ್ಟೆರಾಲ್‌ಗಳು ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ, ಅದು ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಕ್ಯಾರೆಟ್: ಇದು ಬೀಟಾ-ಕ್ಯಾರೋಟಿನ್ ಅನ್ನು ಹೊಂದಿದೆ. ಸ್ವತಂತ್ರ ರಾಡಿಕಲ್‌ಗಳಿಂದ ಹಾನಿಗೊಳಗಾಗುವುದನ್ನು ತಡೆಯಲು ನಿಮ್ಮ ವೀರ್ಯಕ್ಕೆ ಅಗತ್ಯವಿರುವ ಉತ್ಕರ್ಷಣ ನಿರೋಧಕವಾಗಿ ಕ್ಯಾರೆಟ್ ಕೆಲಸ ಮಾಡಬಲ್ಲದು.
ವಾಲ್ನಟ್ : ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುವ ವಾಲ್ನಟ್ ಗಳನ್ನು ಸೇವಿಸಿದ್ರೆ ನಿಮ್ಮ ವೀರ್ಯಗಳ ಚಲನಶೀಲತೆ ಸುಧಾರಿಸುತ್ತವೆ.