
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ತೊಂದರೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಬೆನ್ನುನೋವಿಗೆ ಕಾರಣವೆಂದರೆ ನಮ್ಮ ದೇಹದಲ್ಲಿನ ಪೋಷಕಾಂಶಗಳ ಕೊರತೆ, ಅನಿಯಮಿತ ಜೀವನಶೈಲಿ, ವ್ಯಾಯಾಮದ ಕೊರತೆ, ಒಂದೇ ಸಮನೆ ಕುಳಿತು ಕೆಲಸ ಮಾಡುವುದು. ಬೆನ್ನುನೋವಿಗೆ ವಿಶೇಷ ಕಾರಣವೆಂದರೆ ಕಚೇರಿಯಲ್ಲಿ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ತಪ್ಪಾದ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದು. ನಿರಂತರವಾಗಿ ಈ ರೀತಿಯ ಜೀವನಶೈಲಿ ಸಮಸ್ಯೆಯನ್ನು ಹೆಚ್ಚಿಸುತ್ತಿದೆ.
ಇದಕ್ಕಾಗಿ ಮೊದಲು ನಾವು ಸೇವಿಸುವ ಆಹಾರವನ್ನು ಸರಿಪಡಿಸಿಕೊಳ್ಳಬೇಕು. ಬೆನ್ನು ನೋವು ನಿವಾರಣೆಗೆ ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸಬೇಕು. ಆರೋಗ್ಯ ತಜ್ಞರು ಕೂಡ ಇದನ್ನು ಶಿಫಾರಸು ಮಾಡುತ್ತಾರೆ. ಏಕೆಂದರೆ ಈ ಆಹಾರ ಪದಾರ್ಥಗಳ ಸೇವನೆಯಿಂದ ಸ್ನಾಯುಗಳಿಗೆ ಬಲ ಬರುತ್ತದೆ. ದೇಹದ ಹಲವು ಭಾಗಗಳಲ್ಲಿನ ನೋವಿನಿಂದ ಮುಕ್ತಿ ದೊರೆಯುತ್ತದೆ.
ಒಮೆಗಾ-3 ಕೊಬ್ಬಿನಾಮ್ಲಗಳು – ಬೆನ್ನುನೋವಿನಿಂದ ಪರಿಹಾರವನ್ನು ಪಡೆಯಲು ನಿಮ್ಮ ಆಹಾರದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ. ಇವುಗಳನ್ನು ಸೇವಿಸುವುದರಿಂದ ಬೆನ್ನುನೋವು ನಿವಾರಣೆಯಾಗುತ್ತದೆ. ಡ್ರೈಫ್ರೂಟ್ಸ್, ಬಾದಾಮಿ, ವಾಲ್‌ನಟ್ಸ್, ಚಿಯಾ ಬೀಜಗಳು, ಅಗಸೆ ಬೀಜಗಳನ್ನು ಸೇವಿಸಿ. ಇದರೊಂದಿಗೆ ಮೀನಿನ ಸೇವನೆಯು ಕೂಡ ದೇಹಕ್ಕೆ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಪೂರೈಸುತ್ತದೆ.
ಪ್ರೋಟೀನ್ ಆಹಾರಗಳು – ಅಸಮರ್ಪಕ ಆಹಾರದ ಕಾರಣದಿಂದಾಗಿ ಜನರ ದೇಹದಲ್ಲಿ ಪ್ರೋಟೀನ್ ಕೊರತೆಯಿದೆ. ಅದಕ್ಕಾಗಿಯೇ ಪ್ರೋಟೀನ್ ಭರಿತ ಆಹಾರವನ್ನು ಸೇರಿಸಿಕೊಳ್ಳಬೇಕು. ಇದಕ್ಕಾಗಿ ಮೊಟ್ಟೆ, ಹಾಲು, ಬೇಳೆಕಾಳು ಇತ್ಯಾದಿಗಳನ್ನು ಪ್ರತಿದಿನ ಸೇವಿಸಬೇಕು.
ಹಸಿರು ತರಕಾರಿಗಳು – ನಿರಂತರವಾಗಿ ತೀವ್ರ ಬೆನ್ನು ನೋವು ಹೊಂದಿದ್ದರೆ ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿ. ಸೊಪ್ಪು- ತರಕಾರಿಗಳ ಸೇವನೆಯಿಂದ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ಪ್ರಮುಖವಾಗಿ ಹೂಕೋಸು, ಕೋಸುಗಡ್ಡೆ, ಪಾಲಕ್ ಮತ್ತು ಎಲೆಕೋಸು ಇತ್ಯಾದಿಗಳನ್ನು ತಿನ್ನಲು ಪ್ರಾರಂಭಿಸಿ. ಈ ತರಕಾರಿಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ.
ಹಣ್ಣಿನ ಸೇವನೆ – ಬೆನ್ನುನೋವಿನಿಂದ ಪರಿಹಾರ ಪಡೆಯಲು ಅನಾನಸ್, ಸೇಬುಗಳು, ಚೆರ್ರಿ, ಸಿಟ್ರಸ್ ಹಣ್ಣುಗಳು, ದ್ರಾಕ್ಷಿ ಮುಂತಾದ ತಾಜಾ ಹಣ್ಣುಗಳನ್ನು ಸೇವನೆ ಮಾಡಬೇಕು. ಹಣ್ಣುಗಳ ಸೇವನೆಯಿಂದ ಒಟ್ಟಾರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಹಣ್ಣುಗಳನ್ನು ತಿನ್ನುವುದರಿಂದ ಬೆನ್ನುನೋವು ಕಡಿಮೆಯಾಗುತ್ತದೆ.