ಬೆಂಗಳೂರಿನಲ್ಲಿ ಜ.26 ರಂದು ಗಣರಾಜ್ಯೋತ್ಸವ ನಡೆಯುವ ಹಿನ್ನೆಲೆ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗೂ ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿ ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಸಂಚಾರಿ ಪೊಲೀಸರ ಪ್ರಕಟಣೆ
ದಿನಾಂಕ:26/01/2024 ರಂದು ಬೆಳಗ್ಗೆ 09-00 ಗಂಟೆಗೆ ಕಬ್ಬನ್ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ-2024ರ ಅಂಗವಾಗಿ ರಾಜ್ಯಪಾಲರು ಧ್ವಜಾರೋಹಣ ಮಾಡಿ ಗೌರವ ವಂದನೆ ಸ್ವೀಕರಿಸಿ ಎಲ್ಲರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆ ಬೆಂಗಳೂರು ನಗರ ಸಂಚಾರ ಪೊಲೀಸರು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದ ಒಳಗಡೆ ಮತ್ತು ಸುತ್ತ ಮುತ್ತಲಿನ ರಸ್ತೆಗಳಲ್ಲಿ ಈ ಕೆಳಕಂಡಂತೆ ಸಂಚಾರ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ.
1. ಕಾರ್ ಪಾಸ್ಗಳನ್ನು ಹೊಂದಿರುವ ಎಲ್ಲಾ ಆಹ್ವಾನಿತರು ಅವರುಗಳ ಪಾಸ್ಗಳಲ್ಲಿ ನಿಗದಿಪಡಿಸಿದ ಗೇಟ್ಗಳಲ್ಲಿ ಇಳಿದುಕೊಳ್ಳುವುದು ಹಾಗೂ ಪಾಸ್ನಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವಂತೆ ಕೋರಲಾಗಿದೆ.
2. ತುರ್ತು ಸೇವಾ ವಾಹನಗಳಾದ ಆಂಬುಲೆನ್ಸ್, ಅಗ್ನಿ ಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್, ಕೆ.ಎಸ್.ಆರ್.ಪಿ., ಸಿ.ಆರ್.ಟಿ., ಬಿ.ಬಿ.ಎಂ.ಪಿ. ಹಾಗೂ ಪಿ.ಡಬ್ಲ್ಯೂ.ಡಿ. ವಾಹನಗಳು ಪ್ರವೇಶ ದ್ವಾರ-2 ರ ಮುಖಾಂತರ ಪರೇಡ್ ಮೈದಾನದ ಒಳಗೆ ಪ್ರವೇಶಿಸಿ ನಂತರ ಪೋರ್ಟ್ ವಾಲ್ ಹಿಂಭಾಗದಲ್ಲಿ (ದಕ್ಷಿಣದ ಕಡೆಗೆ) ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
3. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಾಧ್ಯಮದವರ ವಾಹನಗಳು ಪ್ರವೇಶ ದ್ವಾರ 3 ರ ಮೂಲಕ ಒಳಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.
4. ದಿನಾಂಕ:26/01/2024 ರಂದು ಬೆಳಗ್ಗೆ 08-30 ಗಂಟೆಯಿಂದ ಬೆಳಗ್ಗೆ 10-30ರ ವರೆಗೆ ಕಬ್ಬನ್ ರಸ್ತೆಯಲ್ಲಿ ಬಿ.ಆರ್.ವಿ ಜಂಕ್ಷನ್ನಿಂದ ಕಾಮರಾಜ ರಸ್ತೆ ಜಂಕ್ಷನ್ ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರವನ್ನು ನಿರ್ಬಂಧಿಸಿ ಈ ಕೆಳಕಂಡಂತೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.
> ಇನ್ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್ ಫೆಂಟ್ರಿ ರಸ್ತೆ – ಸಫೀನಾ ಪ್ಲಾಜಾ – ಎಡ ತಿರುವು ಪಡೆದು ಮೈನ್ಗಾರ್ಡ್ ರಸ್ತೆ- ಆಲೀಸ್ ಸರ್ಕಲ್- ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ ನಲ್ಲಿ ಎಡಕ್ಕೆ ತಿರುವು ಪಡೆದು. ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದಾಗಿದೆ.
> ಕಬ್ಬನ್ ರಸ್ತೆಯಲ್ಲಿ, ಮಣಿಪಾಲ್ ಸೆಂಟರ್ ಜಂಕ್ಷನ್ನಿಂದ ಬಿ.ಆರ್.ವಿ. ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್ ಸೆಂಟರ್ ಬಳಿ ನಿರ್ಭಂಧಿಸಿದ್ದು, ಸದರಿ ವಾಹನಗಳು ವೆಬ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂ.ಜಿ.ರಸ್ತೆಯ ಮುಖಾಂತರ ಮೆಯೋಹಾಲ್, ಕಾವೇರಿ ಎಂಪೋರಿಯಂ, ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಮುಂದೆ ಸಾಗಬಹುದು.
> ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ಸಾಗಿ, ಬಲಕ್ಕೆ ತಿರುವು ಪಡೆದು-ಇನ್ಫೆಂಟ್ರಿ ರಸ್ತೆ- ಸಫೀನಾ ಪ್ಲಾಜಾ- ಎಡಕ್ಕೆ ತಿರುವು ಪಡೆದು ಮೈನ್ಗಾರ್ಡ್ ರಸ್ತೆ- ಆಲಿ ಸರ್ಕಲ್- ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ – ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದಾಗಿದೆ.
5. ಭದ್ರತಾ ದೃಷ್ಟಿಯಿಂದ ಪೆರೇಡ್ ಗೆ ಬರುವ ಎಲ್ಲಾ ಆಹ್ವಾನಿತರು ಮೊಬೈಲ್ ಫೋನ್, ಹೆಲೈಟ್, ಕ್ಯಾಮೆರಾ, ರೇಡಿಯೋ, ಕೊಡೆ ಮುಂತಾದ ವಸ್ತುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗದಂತೆ ಕೋರಲಾಗಿದೆ. ಇಂತಹ ವಸ್ತುಗಳನ್ನು ಹೊಂದಿರುವವರನ್ನು ಒಳಗೆ ಬಿಡಲಾಗುವುದಿಲ್ಲ. ಎಲ್ಲರೂ ಬೆಳಗ್ಗೆ 08-00 ಗಂಟೆಯ ಒಳಗೆ ಮೈದಾನದಲ್ಲಿ ಆಸೀನರಾಗುವಂತೆ ಕೋರಲಾಗಿದೆ.
ವಾಹನ ನಿಲುಗಡೆ ನಿಷಿದ್ದ ರಸ್ತೆಗಳು
1. ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ವರೆಗೆ
2. ಕಬ್ಬನ್ ರಸ್ತೆ, ಸಿ.ಟಿ.ಓ. ವೃತ್ತದಿಂದ ಕೆ.ಆರ್.ರಸ್ತೆ & ಕಬ್ಬನ್ ರಸ್ತೆ ಜಂಕ್ಷನ್ ವರೆಗೆ
3. ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ಲೀನ್ಸ್ ವೃತ್ತದ ವರೆಗೆ
ವಿಶೇಷ ಮನವಿ
1. ಯಾವುದೇ ಸಹಾಯಕ್ಕಾಗಿ ಪೊಲೀಸರು ಸದಾ ನಿಮ್ಮೊಂದಿಗಿರುತ್ತಾರೆ. ದಯವಿಟ್ಟು ಸ್ಥಳದಲ್ಲಿರುವ ಪೊಲೀಸರನ್ನು ಸಂಪರ್ಕಿಸಿ, ಅಥವಾ 112 ಗೆ ಕರೆಮಾಡಿ.
2. ಗಣರಾಜ್ಯೋತ್ಸವ ದಿನಾಚರಣೆಯನ್ನು ಯಶಸ್ವಿಗೊಳಿಸಲು ತಮ್ಮ ಸಹಕಾರವನ್ನು ಬಯಸುತ್ತೇವೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.