
ಮಾನವ ದೇಹದ ಪ್ರಮುಖ ಅಂಗಗಳಲ್ಲೊಂದು ಮೆದುಳು. ಅದನ್ನು ಆರೋಗ್ಯವಾಗಿಡಲು ಸರಿಯಾದ ಪೋಷಣೆಯ ಅಗತ್ಯವಿದೆ. ಹಾಗಾಗಿ ನಮ್ಮ ಮೆದುಳಿಗೆ ಹಾನಿ ಮಾಡುವ ಕೆಲವು ಆಹಾರಗಳನ್ನು ತ್ಯಜಿಸುವುದು ಉತ್ತಮ.
ಸಕ್ಕರೆ: ಸಕ್ಕರೆಯ ಅತಿಯಾದ ಸೇವನೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ರೀತಿ ಅತಿಯಾದ ಸಕ್ಕರೆ ಸೇವನೆ ಮೆದುಳಿಗೆ ಒಳ್ಳೆಯದಲ್ಲ. ಇದು ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡುವುದು ಮಾತ್ರವಲ್ಲದೆ ಮೆದುಳಿಗೆ ಹಾನಿ ಮಾಡುತ್ತದೆ.
ಎಣ್ಣೆಯುಕ್ತ ಆಹಾರ : ಅತಿಯಾದ ಎಣ್ಣೆಯುಕ್ತ ಆಹಾರವನ್ನು ತಿನ್ನಲು ಇಷ್ಟಪಡುವ ಜನರು ಸಾಮಾನ್ಯವಾಗಿ ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತಕ್ಕೆ ಬಲಿಯಾಗುತ್ತಾರೆ. ಎಣ್ಣೆಯುಕ್ತ ಆಹಾರವು ನಮ್ಮ ಮೆದುಳಿಗೆ ಹಾನಿ ಮಾಡುತ್ತದೆ. ಸಂಸ್ಕರಿಸಿದ ಆಹಾರಗಳು, ಕರಿದ ಪದಾರ್ಥಗಳು, ಎಣ್ಣೆ ಮತ್ತು ಕೊಬ್ಬನ್ನು ಹೊಂದಿರುವ ಆಹಾರಗಳು ಮೆದುಳಿನ ಆರೋಗ್ಯಕ್ಕೆ ಹಾನಿಕಾರಕ.
ಕೆಫೀನ್ : ಭಾರತದಲ್ಲಿ ಚಹಾವನ್ನು ಇಷ್ಟಪಡುವವರಿಗೆ ಕೊರತೆಯಿಲ್ಲ. ನೀರನ್ನು ಬಿಟ್ಟರೆ ಅತಿ ಹೆಚ್ಚು ಸೇವಿಸುವ ಪಾನೀಯವೆಂದರೆ ಚಹಾ. ಅದೇ ರೀತಿ ಭಾರತದಲ್ಲಿ ಕಾಫಿ ಕುಡಿಯುವ ಕೋಟ್ಯಾಂತರ ಜನರಿದ್ದಾರೆ. ಚಹಾ ಮತ್ತು ಕಾಫಿ ಎರಡರಲ್ಲೂ ಅಪಾರ ಪ್ರಮಾಣದ ಕೆಫೀನ್ ಇರುತ್ತದೆ. ಇದು ನೇರವಾಗಿ ನರ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿದ್ರೆಗೆ ಅಡ್ಡಿ ಮಾಡುತ್ತದೆ. ಹಾಗಾಗಿ ಇದು ಮೆದುಳಿನ ಆರೋಗ್ಯಕ್ಕೆ ಮಾರಕ.
ವೇಗವಾಗಿ ತಿನ್ನುವುದು : ಕೆಲವರು ಊಟ-ಉಪಹಾರ ಎಲ್ಲವನ್ನೂ ಬಹಳ ಬೇಗ ತಿಂದು ಮುಗಿಸುತ್ತಾರೆ. ಸರಿಯಾಗಿ ಜಗಿಯದೆ ಗಬಗಬನೆ ತಿಂದುಬಿಡುತ್ತಾರೆ. ಈ ರೀತಿ ತಿಂದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಜೊತೆಗೆ ಮೆದುಳಿಗೆ ಸರಿಯಾದ ಪ್ರಮಾಣದ ನರಪ್ರೇಕ್ಷಕಗಳು ಸಿಗುವುದಿಲ್ಲ. ತಂಬಾಕನ್ನು ಅತಿಯಾಗಿ ಸೇವಿಸುವುದು ಕೂಡ ಅಪಾಯಕಾರಿ. ಇದು ಜ್ಞಾಪಕ ಶಕ್ತಿಯ ನಷ್ಟಕ್ಕೆ ಕಾರಣವಾಗಬಹುದು.