ನಿಮ್ಮ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಾದಾಗ ಮೊಡವೆಗಳ ಸಮಸ್ಯೆ ಉದ್ಭವಿಸುತ್ತದೆ. ವಿಶೇಷವಾಗಿ ಹದಿಹರೆಯದವರಲ್ಲಿ ಮೊಡವೆಗಳು ಸಾಮಾನ್ಯ. ಆದ್ರೆ ಈ ಪಿಂಪಲ್ಸ್‌ನಿಂದಾಗಿ ಮುಖದ ಸೌಂದರ್ಯ ಹಾಳಾಗುತ್ತದೆ.
ಅನಾರೋಗ್ಯಕರ ಆಹಾರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಕೂಡ ಮೊಡವೆಗಳು ಏಳಲು ಕಾರಣ. ಈ ಸಮಸ್ಯೆಗಳಿಗೆ 5 ಆಹಾರಗಳು ರಾಮಬಾಣವಾಗಿವೆ. ಅಂದ್ರೆ ಅವುಗಳನ್ನು ನೀವು ನಿಯಮಿತವಾಗಿ ಸೇವನೆ ಮಾಡಿದ್ರೆ ಮೊಡವೆಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.
ಎಳನೀರು : ಎಳನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಚರ್ಮವನ್ನೂ ಪೋಷಿಸುತ್ತವೆ. ಎಳನೀರನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿ ತೈಲ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಆಗ ತಂತಾನೇ ಮೊಡವೆಗಳು ಮಾಯವಾಗುತ್ತವೆ.
ಸೌತೆಕಾಯಿ: ನೀವು ತುಂಬಾ ಎಣ್ಣೆಯುಕ್ತ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ಮೊಡವೆಗಳು ಏಳುತ್ತವೆ. ಇದನ್ನು ಹೋಗಲಾಡಿಸಲು ನೀವು ಊಟದ ಜೊತೆ ಸೌತೆಕಾಯಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸೌತೆಕಾಯಿ ದೇಹದಿಂದ ವಿಷವನ್ನು ಹೊರಹಾಕುತ್ತದೆ.
ನಿಂಬೆಹಣ್ಣು: ವಿಟಮಿನ್ ಸಿ ಸಮೃದ್ಧವಾಗಿರೋ ನಿಂಬೆಹಣ್ಣನ್ನು ನೀವು ಪ್ರತಿದಿನ ಸೇವಿಸಿದರೆ ಅದು ದೇಹದಿಂದ ತೈಲವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನೀವು ನಿಂಬೆ ಪಾನಕ ಅಥವಾ ಸಲಾಡ್‌ಗೆ ನಿಂಬೆ ರಸವನ್ನು ಹಾಕಿಕೊಂಡು ತಿನ್ನಬಹುದು. ಇದರಿಂದ ಮುಖದ ಹೊಳಪು ಕೂಡ ಹೆಚ್ಚಾಗುತ್ತದೆ. ಮೊಡವೆಗಳು ಕಡಿಮೆಯಾಗುತ್ತವೆ.
ಬೇಳೆ ಕಾಳು : ಬೇಳೆ ಕಾಳುಗಳನ್ನು ಪ್ರೋಟೀನ್ ಮತ್ತು ವಿಟಮಿನ್‌ಗಳ ಸಮೃದ್ಧ ಮೂಲವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ಇದನ್ನು ಪ್ರತಿದಿನ ತಿನ್ನಲು ಶಿಫಾರಸು ಮಾಡುತ್ತಾರೆ. ವಾಸ್ತವವಾಗಿ ಬೇಳೆಕಾಳುಗಳು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ. ಇದನ್ನು ನಿತ್ಯವೂ ಸೇವಿಸಿ, ಆದ್ರೆ ದಾಲ್ ಮಾಡುವಾಗ ಜಾಸ್ತಿ ಎಣ್ಣೆ ಬಳಸಬೇಡಿ.
ಬ್ರೊಕೊಲಿ : ಬ್ರೊಕೊಲಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ. ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಹೆಚ್ಚುವರಿ ಎಣ್ಣೆಯ ಉತ್ಪಾದನೆ ಕಡಿಮೆಯಾಗುತ್ತದೆ. ಬ್ರೊಕೊಲಿಯನ್ನು ಎಣ್ಣೆಯಲ್ಲಿ ಬೇಯಿಸಬೇಡಿ, ಹಸಿಯಾಗಿಯೂ ಸೇವನೆ ಮಾಡಬಾರದು. ಅದನ್ನು ನೀರಿನಲ್ಲಿ ಬೇಯಿಸಿ ತಿನ್ನುವುದು ಸೂಕ್ತ.