* 60 ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲರಿಗೂ ಲಸಿಕೆಗಳನ್ನು ಕಡ್ಡಾಯಗೊಳಿಸಿರುವ ಗ್ರೀಸ್ ಸರ್ಕಾರ, ಮುಂದಿನ ತಿಂಗಳಿನಿಂದ ಈ ವಯೋಮಾನದ ಮಂದಿ ಲಸಿಕೆ ಪಡೆಯದೇ ಸಿಕ್ಕಿಬಿದ್ದಲ್ಲಿ, ಅವರಿಗೆ 100 ಯೂರೋಗಳಷ್ಟು ದಂಡವನ್ನು ಪ್ರತಿ ತಿಂಗಳು ವಿಧಿಸಲಿದೆ.
* ಪಶ್ಚಿಮ ಯೂರೋಪ್‌ನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಲಸಿಕಾ ದರವನ್ನು ಹೊಂದಿರುವ ಆಸ್ಟ್ರಿಯಾದಲ್ಲಿ ಡಿಸೆಂಬರ್ ಮಧ್ಯಭಾಗದವರೆಗೂ ಲಾಕ್‌ಡೌನ್ ಘೋಷಿಸಲಾಗಿದೆ. ಲಸಿಕೆ ಪಡೆದ ಅಥವಾ ವೈರಸ್‌ನಿಂದ ಇತ್ತೀಚೆಗೆ ಚೇತರಿಸಿಕೊಂಡ ಮಂದಿಗೆ ಮಾತ್ರವೇ ಲಾಕ್‌ಡೌನ್‌ನಿಂದ ವಿನಾಯಿತಿ ನೀಡುವುದಾಗಿ ಅಲ್ಲಿನ ಅಧ್ಯಕ್ಷ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ತಿಳಿಸಿದ್ದಾರೆ. ಲಸಿಕೆ ಪಡೆಯದ ಮಂದಿಗೆ 7,200 ಯೂರೋಗಳಷ್ಟು ದಂಡ ವಿಧಿಸಿ, ಫೆಬ್ರವರಿಯಿಂದ ಆಚೆಗೆ ಲಸಿಕೆ ಕಡ್ಡಾಯಗೊಳಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
* ಕೋವಿಡ್ ಪ್ರಮಾಣ ಪತ್ರ ಬಳಸಲು ನಿರಾಕರಿಸುವ ಬಾರ್‌ಗಳು ಹಾಗೂ ರೆಸ್ಟೋರೆಂಟ್‌ಗಳನ್ನು ಸಂಜೆ 5 ಗಂಟೆಯ ಮೇಲೆ ತೆರೆಯಲು ಅವಕಾಶ ನೀಡದೇ ಇರಲು ಫಿನ್ಲೆಂಡ್ ಸರ್ಕಾರ ನಿರ್ಧರಿಸಿದೆ. ಕೋವಿಡ್ ಲಸಿಕೆ ಪಡೆಯಲು ಜನರನ್ನು ಉತ್ತೇಜಿಸಲು ಫಿನ್ಲೆಂಡ್‌ನ ಅಧಿಕಾರಿಗಳು ಉಡುಗೊರೆಗಳನ್ನು ನೀಡಲು ಸಹ ಮುಂದಾಗಿದ್ದಾರೆ.
* ಸಂಪೂರ್ಣ ಲಸಿಕೆ ಪಡೆಯದ ಬ್ರಿಟನ್ ಪ್ರಜೆಗಳ ಮೇಲೆ ಸಂಚಾರ ನಿರ್ಬಂಧ ಹೇರಿರುವ ಸ್ಪೇನ್, ಸೋಂಕಿನಿಂದ ಚೇತರಿಸಿಕೊಂಡ ಪ್ರಮಾಣಪತ್ರವನ್ನೂ ಸಹ ಸ್ವೀಕರಿಸುತ್ತಿಲ್ಲ.
* ಕೋವಿಡ್ ವಿರುದ್ಧ ಲಸಿಕೆ ಪಡೆಯದ ಉದ್ಯೋಗಿಗಳಿಗೆ ಲಸಿಕೆ ಕಡ್ಡಾಯಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಕಂಪನಿಗಳಿಗೆ ಸೂಚಿಸಿರುವ ಹಂಗೇರಿ ಸರ್ಕಾರ, ಲಸಿಕೆ ಪಡೆಯದ ಮಂದಿಯನ್ನು ವೇತನರಹಿತ ರಜೆಯ ಮೇಲೆ ಇಡಲು ಸೂಚಿಸಿದೆ.
* ಕೋವಿಡ್ ಲಸಿಕೆ ಪಡೆಯಲು ಮುಂದೆ ಬರುವ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ 500 ಯೂರೋಗಳ ವೌಚರ್‌ಗಳನ್ನು ನೀಡಲು ಸ್ಲೋವೇಕಿಯಾದ ವಿತ್ತ ಸಚಿವ ಇಗೋರ್ ಮಟೋವಿಕ್ ಇಚ್ಛಿಸಿದ್ದಾರೆ. ರೆಸ್ಟೋರೆಂಟ್‌ಗಳು ಹಾಗೂ ಹೊಟೇಲ್‌ಗಳಲ್ಲಿ ಬಳಸಬಹುದಾದ ಈ ವೌಚರ್‌ಗಳ ವಿತರಣೆಗೆ ಸರ್ಕಾರದ ಕೆಲ ವಲಯಗಳಿಂದ ವಿರೋಧವಿದ್ದರೂ ಸಹ ಮಟೋವಿಕ್‌ಗೆ ಈ ವಿಚಾರವಾಗಿ ವಿರೋಧ ಪಕ್ಷಗಳ ಬೆಂಬಲವೂ ಸಿಕ್ಕಿದೆ.
* ಸಿಂಗಪುರದಲ್ಲಿ ಲಸಿಕೆ ಪಡೆಯಲಿಚ್ಛಿಸದ ಮಂದಿ ಕೋವಿಡ್‌ಗೆ ತುತ್ತಾದಲ್ಲಿ ತಮ್ಮದೇ ಖರ್ಚಿನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಗುತ್ತದೆ. ಥೆರಾಪೆಟಿಕ್ಸ್ ಪಡೆದುಕೊಂಡು ಐಸಿಯುನಲ್ಲಿ ಉಳಿಯುವ ರೋಗಿಗಳು ಸುಮಾರು $25,000ಗಳಷ್ಟು ದುಡ್ಡು ಖರ್ಚು ಮಾಡಬೇಕಾಗುತ್ತದೆ ಎಂದು ಆರೋಗ್ಯ ಸಚಿವಾಲಯದ ಅಂದಾಜು ತಿಳಿಸುತ್ತದೆ.
* ಯೂರೋಪ್‌ನ ಬಹಳಷ್ಟು ದೇಶಗಳ ಬಾರುಗಳು ಹಾಗೂ ರೆಸ್ಟೋರೆಂಟ್‌ಗಳನ್ನು ಪ್ರವೇಶಿಸಲು ಕೋವಿಡ್ ಲಸಿಕೆಯ ಪ್ರಮಾಣ ಪತ್ರಗಳು ಬೇಕಾಗುತ್ತವೆ. ಈ ವಿಚಾರದಲ್ಲಿ ಲಿಥುವೇನಿಯಾ ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. 16 ವರ್ಷ ಮೇಲ್ಪಟ್ಟ ಮಂದಿ ರೆಸ್ಟೋರೆಂಟ್, ಶಾಪಿಂಗ್ ಮಾಲ್, ಸಿನೆಮಾ, ಬ್ಯೂಟಿ ಸಲೋನ್, ಕೆಫೆ ಅಥವಾ ಇನ್ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ರೋಗನಿರೋಧಕ ಪ್ರಮಾಣ ಪತ್ರಗಳನ್ನು ತೋರಬೇಕಾಗುತ್ತದೆ. ಇದರೊಂದಿಗೆ ಮಾರ್ಚ್ 31ಕ್ಕೂ ಮುನ್ನ ಬೂಸ್ಟರ್ ಡೋಸ್ ಪಡೆಯುವ 75 ವರ್ಷ ಮೇಲ್ಪಟ್ಟ ಮಂದಿಗೆ 100 ಯೂರೋಗಳ ಪ್ರೋತ್ಸಾಹ ಧನ ನೀಡಲು ಸಹ ಅಲ್ಲಿನ ಸರ್ಕಾರ ನಿರ್ಧರಿಸಿದೆ.
* ಖಾಸಗಿ ಕ್ಷೇತ್ರದ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ಅಥವಾ ನಿರಂತರ ಪರೀಕ್ಷೆಗಳನ್ನು ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಲು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಡಳಿತ ತುರ್ತು ನಿಯಮವೊಂದನ್ನು ಹೊರಡಿಸಿದೆ. 100ಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಕಂಪನಿಗಳಿಗೆ ಅನ್ವಯವಾಗುವ ಈ ನಿಯಮದ ಅಡಿ ಜನವರಿ 4ರ ಡೆಡ್ಲೈನ್ ನೀಡಲಾಗಿದೆ. ನಿಯಮಕ್ಕೆ ಬದ್ಧರಾಗದೇ ಇರುವ ಕಂಪನಿಗಳಿಗೆ $136,000ದಷ್ಟು ದಂಡ ಬೀಳುವ ಸಾಧ್ಯತೆ ಇದೆ.
ಲಸಿಕೆಯನ್ನು ಕಡ್ಡಾಯಗೊಳಿಸಿದ ಕಾರಣ, ಲಸಿಕೆ ಪಡೆಯದ 5%ನಷ್ಟು ಉದ್ಯೋಗಿಗಳು ತಂತಮ್ಮ ಕೆಲಸ ಬಿಟ್ಟಿದ್ದಾರೆ ಎಂದು ಕೈಸರ್ ಫ್ಯಾಮಿಲಿ ಪ್ರತಿಷ್ಠಾನ ಅಕ್ಟೋಬರ್ ತಿಂಗಳಲ್ಲಿ ನಡೆಸಿದ ಸರ್ವೇಯಿಂದ ತಿಳಿದುಬಂದಿದೆ.
* ಉಕ್ರೇನ್‌ನಲ್ಲಿ ಸಂಪೂರ್ಣವಾಗಿ ಲಸಿಕೆ ಪಡೆಯದ ಶಿಕ್ಷಕರು ಹಾಗೂ ಸರ್ಕಾರಿ ಅಧಿಕಾರಿಗಳನ್ನು ವೇತನರಹಿತ ರಜೆಯ ಮೇಲೆ ಇರಿಸಲಾಗಿದೆ. ತಮ್ಮ ಸಿಬ್ಬಂದಿಯ 100%ರಷ್ಟು ಮಂದಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಿದ್ದಲ್ಲಿ ಮಾತ್ರವೇ ಕಾರ್ಯ ನಿರ್ವಹಿಸಲು ರೆಸ್ಟೋರೆಂಟ್‌ಗಳು, ಶಾಪಿಂಗ್ ಮಾಲ್‌ಗಳಂತಹ ಜಾಗಗಳಿಗೆ ಅವಕಾಶ ನೀಡಲಾಗಿದೆ. ಕೇವಲ ಲಸಿಕೆ ಪಡೆದ ಮಂದಿಗೆ ಮಾತ್ರವೇ ದೇಶದ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.