ಬೇಸಿಗೆಯಲ್ಲಿ ದಾಹ ತೀರಿಸಲು ಹಲವಾರು ಪಾನೀಯಗಳ ಮೊರೆ ಹೋಗುತ್ತೇವೆ. ಯಾಕೆಂದರೆ ಪಾನೀಯಗಳು ದೇಹವನ್ನು ತಂಪಾಗಿಡುತ್ತವೆ. ಬಾಯಾರಿಕೆ, ಸುಸ್ತು ನೀಗಿಸುತ್ತದೆ. ಅಗತ್ಯ ಪೋಷಕಾಂಶಗಳು, ನೀರಿನ ಅಂಶವನ್ನು ದೇಹಕ್ಕೆ ಪೂರೈಸುತ್ತದೆ.
ನಾವೀಗಾಗಲೇ ಮಜ್ಜಿಗೆ, ಎಳನೀರು ಮುಂತಾದ ದೇಹಕ್ಕೆ ತಂಪು ನೀಡುವ ಪಾನೀಯಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇನ್ನೂ ಕೆಲವು ಪಾನೀಯಗಳ ಮಹತ್ವ ತಿಳಿಯೋಣ.
ಸಿಹಿ ಲಸ್ಸಿ
ಸಿಹಿ ಮೊಸರಿಗೆ ಕಲ್ಲುಸಕ್ಕರೆ ಬೆರೆಸಿ ಮಿಕ್ಸರ್ ನಲ್ಲಿ ತಿರುವಿ ಲಸ್ಸಿ ತಯಾರಿಸಿ ಸೇವಿಸಬಹುದು.
ಕಬ್ಬಿನ ಹಾಲು
ಇದಕ್ಕೆ ನಿಂಬೆರಸ ಬೆರೆಸಿ ಸೇವಿಸಬೇಕು. ಅದೂ ಬೇಸಿಗೆಯಲ್ಲಿ ಮಾತ್ರ. ಬೇರೆ ಸೀಸನ್ ಗಳಲ್ಲಿ ಬರೀ ಕಬ್ಬಿನ ರಸ ಸೇವಿಸಬೇಕು. ಅದಕ್ಕೆ ಸಕ್ಕರೆ, ಬೆಲ್ಲ, ಜೇನುತುಪ್ಪ ಇತ್ಯಾದಿಗಳನ್ನು ಬೆರೆಸಬಾರದು.
ಕಲ್ಲಂಗಡಿ ಜ್ಯೂಸ್
ಕಲ್ಲಂಗಡಿ ಹಣ್ಣಿನ ತಿರುಳಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸಿನಪುಡಿ ಬೆರೆಸಿ ಮಿಕ್ಸಿ ಯಲ್ಲಿ ತಿರುವಿ ಸವಿಯಬಹುದು.
ರಾಗಿ ಪಾನೀಯ
ಮೊಳಕೆ ಬರಿಸಿದ ರಾಗಿ ರುಬ್ಬಿ ಸೋಸಿ, ಅದಕ್ಕೆ ಬೆಲ್ಲ ಹಾಕಿ ತಣ್ಣಗೆ ಅಥವಾ ಬಿಸಿ ಮಾಡಿ ಸೇವಿಸಬಹುದು.
ಟೊಮೇಟೋ ಪಾನೀಯ
ಮೂರು ಟೋಮೇಟೋಗಳನ್ನು ಹೆಚ್ಚಿ ರುಬ್ಬಬೇಕು. ಅದಕ್ಕೆ ಕಿತ್ತಳೆ, ನಿಂಬೆ ಅಥವಾ ಮೋಸಂಬಿ ರಸ ಬೆರೆಸಿ ಕುಡಿದರೆ ರುಚಿಯಾಗಿರುತ್ತದೆ.
ಹೆಸರಿನ ಪೇಯ
ಹೆಸರು ಕಾಳನ್ನು ಹುರಿದು ಪುಡಿ ಮಾಡಿ, ನೀರು ಹಾಗೂ ಬೆಲ್ಲ ಸೇರಿಸಿ ಸೇವಿಸಬಹುದು.
ಕಿತ್ತಳೆ ಲಸ್ಸಿ
ಸಿಹಿ ಮೊಸರು ೧ ಕಪ್, ಕಿತ್ತಳೆ ರಸ ೧ ಕಪ್, ಸ್ವಲ್ಪ ಸಕ್ಕರೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.
ರಸಾಯನ
ಸಿಹಿ ಮಾವಿನಹಣ್ಣನ್ನು ಕತ್ತರಿಸಿ ಸಕ್ಕರೆ ಜೊತೆ ಬೆರೆಸಿ ಮಿಕ್ಸರ್ ನಲ್ಲಿ ರುಬ್ಬಿ ನೀರಿನ ಬದಲು ಹಾಲು ಬೆರೆಸಿದರೆ ಮಾವಿನ ರಸಾಯನ ಅಥವಾ ಮಿಲ್ಕ್ ಶೇಕ್ ಸಿದ್ಧ. ಬಾಳೆಹಣ್ಣಿನ ಮಿಲ್ಕ್ ಶೇಕ್ ಕೂಡ ತಯಾರಿಸಬಹುದು.
ಎಳ್ಳಿನ ನೀರು
ಬಿಳಿ ಎಳ್ಳನ್ನು ಹುರಿದು ಪುಡಿ ಮಾಡಿ ಅದಕ್ಕೆ ನೀರು, ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ ಬೆರೆಸಿ ಜ್ಯೂಸ್ ಸೇವಿಸಬಹುದು.