ಕಂಕಣ ಭಾಗ್ಯ ಕೂಡಿ ಬಂದಿದೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗೋದು ಎಂಬ ಗೊಂದಲ ಶುರುವಾಗಿದೆ. ವಿದೇಶಕ್ಕೆ ಹೋಗುವಷ್ಟು ಬಜೆಟ್ ಇಲ್ಲ ಅಂತಾ ಚಿಂತೆ ಮಾಡುವ ಅಗತ್ಯವಿಲ್ಲ.
ನಮ್ಮ ದೇಶದಲ್ಲಿಯೇ ಮಧುಚಂದ್ರ ಕಳೆಯುವ ಸುಂದರ ತಾಣಗಳಿವೆ. ಕಡಿಮೆ ಖರ್ಚಿನಲ್ಲಿ, ರಮಣೀಯ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಅನೇಕ ಸ್ಥಳಗಳು ನಮ್ಮಲ್ಲಿವೆ.
ಲಕ್ಷದ್ವೀಪ : ಸೂರ್ಯ ಮುತ್ತಿಕ್ಕುವ ಕಡಲ ತೀರಗಳು, ಮಂತ್ರಮುಗ್ಧಗೊಳಿಸುವ ಪ್ರದೇಶ, ನೀಲಿ ಬಣ್ಣದಲ್ಲಿ ಮನಸೂರೆಗೊಳ್ಳುವ ನೀರು. ಇನ್ನೇನು ಬೇಕು? ಮನ ಮೆಚ್ಚಿದ ಮಡದಿ ಜೊತೆ ಕೆಲ ದಿನಗಳನ್ನು ಏಕಾಂತವಾಗಿ ಕಳೆಯಲು ಲಕ್ಷದ್ವೀಪ ಹೇಳಿ ಮಾಡಿಸಿದ ಪ್ರವಾಸಿ ತಾಣ. ಅಲ್ಲಿನ ನೈಜ ಆಕರ್ಷಣೆ, ಸುತ್ತಲೂ ಆವರಿಸಿರುವ ನೀರು, ಕೆಡದ ಹವಳದ ಬಂಡೆಗಳು ಮತ್ತು ಬೆಚ್ಚಗಿನ ನೀರು ಸೂಜಿಗಲ್ಲಂತೆ ಆಕರ್ಷಿಸುತ್ತದೆ.
ಗೋವಾ : ಈಗಷ್ಟೇ ಮದುವೆಯಾದವರಿಗೆ ಗೋವಾ ಹೇಳಿ ಮಾಡಿಸಿದ ಸ್ಥಳ. ಮೈಲಿಯುದ್ದಕ್ಕೆ ಚಾಚಿರುವ ಬೀಚ್, ವಿಶ್ರಮಿಸಲು ವಿಶಾಲವಾದ ಸ್ಥಳ, ತಂಪೆರೆಯುವ ತೆಂಗಿನ ಮರಗಳು, ಹಳೆಯ ಪೋರ್ಚುಗೀಸ್ ಕಟ್ಟಡಗಳು, ರುಚಿರುಚಿಯಾದ ತಿನಿಸು ಗೋವಾದ ವಿಶೇಷತೆ. ಗೋವಾದಲ್ಲಿ ಮಿತಿಯಿಲ್ಲದಷ್ಟು ಮೋಜು, ಮಸ್ತಿಯಲ್ಲಿ ತೊಡಗಿ ಮಧುರ ಮಧುಚಂದ್ರದ ಸವಿ ಸವಿಯಬಹುದು.
ಅಂಡಮಾನ್ : ಹೊಸ ಜೋಡಿಯನ್ನು ಅಂಡಮಾನ್ ಮರಳುಭೂಮಿಯ ಕಡಲ ತೀರಗಳು ಸೆಳೆಯುತ್ತವೆ. ಅದ್ಭುತ ಹವಳಗಳು ಮತ್ತು ಸಮುದ್ರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಕರ್ಷಣೆ. ಗಾಢ ಅರಣ್ಯ, ಭವ್ಯವಾದ ಬೆಟ್ಟಗಳ ಜೊತೆ ಸ್ಕೂಬಾ ಡೈವಿಂಗ್ ನವವಿವಾಹಿತರ ಸಮಯವನ್ನು ಮತ್ತಷ್ಟು ಸುಮಧುರಗೊಳಿಸುತ್ತೆ. ಅಲ್ಲಿನ ರೆಸಾರ್ಟ್ ಐಷಾರಾಮಿಯಾಗಿರುತ್ತವೆ.
ಕೂರ್ಗ್ (ಕೊಡಗು) : ಪಶ್ಚಿಮ ಘಟ್ಟಗಳ ಅಡ್ಡಲಾಗಿ ಹರಡಿರುವ ಕೊಡಗಿನ ಮಂಜಿನ ಕಣಿವೆ ಮಧುಚಂದ್ರಕ್ಕೆ ಅದ್ಭುತ ತಾಣ. ಮುಗ್ಧ ಸೌಂದರ್ಯ ಮತ್ತು ಆಹ್ಲಾದಕರ ಹವಾಗುಣದಿಂದಾಗಿ ಕೊಡಗನ್ನು ‘ಭಾರತದ ಸ್ಕಾಟ್ಲ್ಯಾಂಡ್’ ಎಂದೇ ಕರೆಯಲಾಗುತ್ತದೆ. ‘ಕರ್ನಾಟಕದ ಕಾಶ್ಮೀರ’ ಎಂದು ಪ್ರಸಿದ್ಧವಾಗಿರುವ ಕೊಡಗಿನ ಟೀ ಎಸ್ಟೇಟ್, ಕಾಫಿ ತೋಟಗಳು ನವವಿವಾಹಿತರ ಮನಸ್ಸಿಗೆ ಮುದ ನೀಡುವುದಲ್ಲದೇ, ಪ್ರಶಾಂತ ಸ್ಥಳ ಮನಸ್ಸನ್ನು ಉಲ್ಲಾಸಗೊಳಿಸುತ್ತೆ. ಅಲ್ಲಿ ಅನೇಕ ಪ್ರಸಿದ್ಧ ಸ್ಥಳಗಳಿದ್ದು, ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿದೆ.
ಉದಯ್ಪುರ : ಅದ್ಭುತ ಅರಮನೆಗಳು, ದೇವಸ್ಥಾನಗಳು, ಹವೇಲಿಗಳು ಮತ್ತು ಅಸಂಖ್ಯಾತ ಇಕ್ಕಟ್ಟಾದ ವಕ್ರ ಬೀದಿಗಳು ರಾಜಸ್ಥಾನ ಗಮನ ಸೆಳೆಯುವಂತೆ ಮಾಡಿದೆ. ನಗರದ ಸೌಂದರ್ಯ, ದೋಣಿವಿಹಾರ, ಸರೋವರಗಳು ಮಧುಚಂದ್ರಕ್ಕೆ ಹೇಳಿ ಮಾಡಿಸಿದಂತಿದೆ.
ಕೇರಳ : ಮಧುಚಂದ್ರಕ್ಕೆ ಕೇರಳ ಸೂಕ್ತ ಸ್ಥಳ. ಅಲ್ಲಿನ ಹಿನ್ನೀರು, ಹಳ್ಳಿಯ ಜೀವನ, ಜೈವಿಕ ವೈವಿಧ್ಯತೆ, ಶಾಂತ ವಾತಾವರಣ ಕಣ್ಣಿಗೆ ಹಾಗೂ ಮನಸ್ಸಿಗೆ ಆನಂದ ನೀಡುತ್ತದೆ.