ಸಾರ್ವಜನಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು, ಮಹಿಳೆಯರು, ಅಸಂಘಟಿತ ವರ್ಗದ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು ಮೊದಲಾದ ವರ್ಗಗಳಿಗೆ ಈ ಯೋಜನೆ ಅನುಕೂಲಕರವಾಗಿದೆ. ಈ ಪೈಕಿ 5 ಪ್ರಮುಖ ಸಾಮಾಜಿಕ ಭದ್ರತೆ ನೀಡುವ ಯೋಜನೆಗಳ ಕುರಿತು ಮಾಹಿತಿ ಇಲ್ಲಿದೆ.
ಅಟಲ್ ಪಿಂಚಣಿ ಯೋಜನೆ: ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರಿಗೆ ಭವಿಷ್ಯ ನಿಧಿ ಹಾಗೂ ಪಿಂಚಣಿ ಹಣದ ರೂಪದಲ್ಲಿ ಒಂದಷ್ಟು ಉಳಿತಾಯ ಮಾಡಲು ಅಟಲ್ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಚಂದಾದಾರರು 60 ವರ್ಷ ವಯಸ್ಸಾದ ಬಳಿಕ ಕನಿಷ್ಠ ಮಾಸಿಕ ಪಿಂಚಣಿ ರೂಪದಲ್ಲಿ 1000 ರೂ.ಗಳಿಂದ 5000 ರೂ.ಗಳವರೆಗೆ ಪಡೆಯಲಿದ್ದಾರೆ. ಪಾವತಿ ಮಾಡುವ ಪ್ರೀಮಿಯಂ ಹಣ ಹಾಗೂ ಯೋಜನೆಗೆ ನೋಂದಣಿಯಾದ ವಯಸ್ಸಿನ ಮೇಲೆ ಚಂದಾದಾರರು ಪಡೆಯುವ ಪಿಂಚಣಿಯ ಮೊತ್ತ ನಿರ್ಧಾರವಾಗಲಿದೆ.
ಯೋಜನೆಗೆ ನೋಂದಣಿಯಾದ ವಯಸ್ಸು ಹಾಗೂ ಆಯ್ಕೆ ಮಾಡಿಕೊಂಡ ಪಿಂಚಣಿ ಮೊತ್ತವನ್ನು ಅವಲಂಬಿಸಿ 42 ರೂ.ಗಳಿಂದ 210 ರೂ. ಪ್ರತಿ ತಿಂಗಳು ಪಾವತಿ ಮಾಡುತ್ತಾ ಇರಬಹುದು. ಯೋಜನೆಯ ಜಾಲತಾಣ ನೀಡುವ ಮಾಹಿತಿಯಂತೆ, 18ನೇ ವಯಸ್ಸಿಗೆ ನೋಂದಣಿಯಾದ ಚಂದಾದಾರರು 42 ರೂ. ಹಾಗೂ 210 ರೂ.ಗಳನ್ನು ಮಾಸಿಕವಾಗಿ ಪಾವತಿ ಮಾಡುತ್ತಾ ಹೋದಲ್ಲಿ, ಪ್ರತಿ ತಿಂಗಳು ಕ್ರಮವಾಗಿ 1,000 ರೂ.ಗಳು ಹಾಗೂ 5,000 ರೂ.ಗಳನ್ನು ಪಡೆಯಬಹುದಾಗಿದೆ.
ಅಟಲ್ ಪಿಂಚಣಿ ಯೋಜನೆಗೆ ಮೂರು ವಿಧಗಳಲ್ಲಿ ಪಾವತಿ ಮಾಡಬಹುದಾಗಿದೆ: ಮಾಸಿಕ, ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕ.
ಈ ಯೋಜನೆಯಡಿ, ಚಂದಾದಾರರಿಗೆ ಪಿಂಚಣಿ ಹಣ ದೊರಕಲಿದ್ದು, ಅವರ ನಿಧನಾನಂತರ ಅವರ ಜೀವನಸಂಗಾತಿಗೆ ದೊರಕಲಿದ್ದು, ಚಂದಾದರರಿಗೆ 60 ವರ್ಷ ತುಂಬುವ ಸಂದರ್ಭ ಸಂಗ್ರಹವಾದ ಪಿಂಚಣಿಯ ಮೊತ್ತವನ್ನು ಅವರ ಸಂಗಾತಿಗೆ ನೀಡಲಾಗುವುದು.
ಸಾವು/ ಮಾರಣಾಂತಿಕ ಕಾಯಿಲೆಯಂಥ ಸಂದರ್ಭಗಳಲ್ಲಿ ಚಂದಾದಾರರು ತಮ್ಮ ಹಣವನ್ನು ಅವಧಿಗೂ ಮುನ್ನವೇ ಹಿಂಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆ : ಸುಕನ್ಯಾ ಸಮೃದ್ಧಿ ಯೋಜನೆ ಒಂದು ಸಣ್ಣ ಉಳಿತಾಯ ಯೋಜನೆ. ಕೇಂದ್ರ ಸರ್ಕಾರ ಇದನ್ನು ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದ ಅಡಿಯಲ್ಲಿ ಆರಂಭಿಸಿದೆ. ಈ ಯೋಜನೆಯಡಿ ಪೋಷಕರು, ಹೆಣ್ಣು ಮಗುವಿನ ಹೆಸರಿನಲ್ಲಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬಹುದು. ಖಾತೆ ತೆರೆಯಲು ಹೆಣ್ಣು ಮಗುವಿನ ವಯಸ್ಸಿನ ಮಿತಿ 10 ವರ್ಷಕ್ಕಿಂತ ಕಡಿಮೆ ಇರಬೇಕು. ಇಬ್ಬರು ಹುಡುಗಿಯರ ಹೆಸರಿನಲ್ಲಿ ಮಾತ್ರ ಪ್ರತ್ಯೇಕ ಖಾತೆಗಳನ್ನು ತೆರೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆಯ ಮುಕ್ತಾಯ ಮಿತಿಯನ್ನು 15 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಪ್ರತಿ ವರ್ಷ ಈ ಖಾತೆಯಲ್ಲಿ ಕನಿಷ್ಠ 250 ರೂಪಾಯಿ ಹಾಗೂ ಗರಿಷ್ಠ 1,50,000 ರೂಪಾಯಿ ಹೂಡಿಕೆ ಮಾಡಬಹುದು. ಮಗಳಿಗೆ 21 ವರ್ಷ ತುಂಬಿದ ನಂತ್ರ ನೀವು ಖಾತೆ ಮುಚ್ಚಬಹುದು. ತುರ್ತು ಪರಿಸ್ಥಿತಿಯಲ್ಲಿ ಶೇಕಡಾ 50ರಷ್ಟು ಹಣವನ್ನು ತೆಗೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಸ್ತುತ ಬಡ್ಡಿದರ ಶೇಕಡಾ 7.6 ರಷ್ಟಿದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ: ಕೇಂದ್ರ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ವಾರ್ಷಿಕ ಪ್ರೀಮಿಯಂ ಕೇವಲ 330 ರೂಪಾಯಿಗಳಾಗಿದೆ. ಎರಡು ಲಕ್ಷ ರೂಪಾಯಿ ಮೊತ್ತದ ಜೀವವಿಮೆ ದೊರೆಯಲಿದೆ. 18 ರಿಂದ 50 ವರ್ಷ ವಯಸ್ಸಿನ ವ್ಯಕ್ತಿಗಳು ಇದರ ಚಂದಾದಾರರಾಗಬಹುದಾಗಿದ್ದು, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಯಿಂದ ಪ್ರೀಮಿಯಂ ಆಟೋ ಡೆಬಿಟ್ ಆಗುತ್ತದೆ.
ಇನ್ನು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ವಾರ್ಷಿಕ ಪ್ರೀಮಿಯಂ ಕೇವಲ 12 ರೂಪಾಯಿಗಳಾಗಿದ್ದು, 2 ಲಕ್ಷ ರೂಪಾಯಿಗಳವರೆಗೆ ದುರ್ಘಟನಾ ವಿಮೆ ಪರಿಹಾರ ಸಿಗಲಿದೆ. 18 ರಿಂದ 70 ವರ್ಷ ವಯಸ್ಸಿನ ವ್ಯಕ್ತಿಗಳು ಇದರ ಚಂದಾದಾರರಾಗಬಹುದಾಗಿದ್ದು,ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಯಿಂದ ಪ್ರೀಮಿಯಂ ಆಟೋ ಡೆಬಿಟ್ ಆಗುತ್ತದೆ. ಈ ಎರಡು ವಿಮೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಸಮೀಪದ ಬ್ಯಾಂಕ್ ಶಾಖೆ, ವಿಮಾ ಕಚೇರಿ ಅಥವಾ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ರೈತರ ಬೆಳೆ ರಕ್ಷಣೆ ಕುರಿತಂತೆ ‘ಪ್ರಧಾನ ಮಂತ್ರಿ ಫಸಲ್ ಬಿಮಾ’ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಯೋಜನೆಯಡಿ ಬಿತ್ತನೆ/ನಾಟಿಯ ಅಪಾಯವನ್ನು ತಡೆಯುವುದು, ನಿಂತಿರುವ ಬೆಳೆ (ಬಿತ್ತನೆಯಿಂದ ಕೊಯ್ಲಿನ ತನಕ), ಕೊಯ್ಲಿನ ನಂತರದ ನಷ್ಟಗಳು ಹಾಗೂ ಸ್ಥಳೀಯ ವಿಪತ್ತುಗಳಿಗೆ ಸುರಕ್ಷಾ ಕವಚವನ್ನು ನೀಡಲಾಗುತ್ತದೆ.
ರೈತರು ಬೆಳೆದ ಬೆಳೆಗನುಗುಣವಾಗಿ ವಿಮೆ ಸೌಲಭ್ಯ ದೊರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ಕೃಷಿ ಇಲಾಖೆ ಕಛೇರಿಗೆ ಭೇಟಿ ನೀಡಬೇಕಾಗುತ್ತದೆ.
ಜನ್ ಧನ್ ಖಾತೆ : ಜನ್ ಧನ್ ಖಾತೆಯು ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯಾಗಿದೆ. ಇದ್ರಲ್ಲಿ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ರುಪೇ ಕಾರ್ಡ್, ಓವರ್ ಡ್ರಾಫ್ಟ್ ಸೇರಿದಂತೆ ಅನೇಕ ಸೌಲಭ್ಯಗಳು ಸಿಗುತ್ತದೆ. ಈ ಖಾತೆಯಲ್ಲಿ ಗ್ರಾಹಕರಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಇದರಲ್ಲಿ 1 ಲಕ್ಷ ರೂಪಾಯಿಗಳ ಅಪಘಾತ ವಿಮೆ ಲಭ್ಯವಿದೆ.
ಜನ ಧನ್ ಖಾತೆ ಹೊಂದಿರುವ ಮತ್ತು ರುಪೇ ಡೆಬಿಟ್ ಕಾರ್ಡ್ ಬಳಸುವವರಿಗೆ 30 ಸಾವಿರ ವಿಮಾ ಸೌಲಭ್ಯ ಲಭ್ಯವಿದೆ. ಲಾಭ ಹೊರತುಪಡಿಸಿ ಜನ ಧನ್ ಖಾತೆದಾರರಿಗೆ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪ್ರತ್ಯೇಕವಾಗಿ ನೀಡುತ್ತದೆ.
ಆದರೆ ಕಾರ್ಡ್ ಬಳಕೆ ಸಕ್ರಿಯವಾಗಿರಬೇಕಾಗುತ್ತದೆ. ಕಳೆದ 60 ದಿನಗಳಿಂದ ಬಳಕೆದಾರರ ಕಾರ್ಡ್‌ಗಳು ಸಕ್ರಿಯವಾಗಿಲ್ಲದಿದ್ದರೆ ನಂತರ ವಿಮಾ ಹಕ್ಕು ರದ್ದುಗೊಳ್ಳುತ್ತದೆ.