ಮಹಿಳೆಯರಿಗೆಂದೇ ಅನೇಕ ಸರ್ಕಾರಿ ಯೋಜನೆಗಳಿವೆ. ಇವುಗಳಲ್ಲಿ ಹೂಡಿಕೆ ಮಾಡಿದ್ರೆ ಮಹಿಳೆಯರು ದುಪ್ಪಟ್ಟು ಲಾಭ ಪಡೆಯಬಹುದು. ಅದರಲ್ಲೂ ಅಂಚೆ ಕಛೇರಿಯಲ್ಲಿರುವ ಸ್ಕೀಮ್‌ಗಳು ಸಂಪೂರ್ಣ ಸುರಕ್ಷಿತ. ಹೆಚ್ಚು ರಿಸ್ಕ್ ಇಲ್ಲದೇ ಅಧಿಕ ಲಾಭ ಪಡೆಯಬಹುದಾದಂತಹ 5 ಯೋಜನೆಗಳ ಬಗ್ಗೆ ತಿಳಿದುಕೊಳ್ಳೋಣ. PPF, ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಕೂಡ ಇವುಗಳಲ್ಲಿ ಸೇರಿವೆ.
ಹಣ ಹೂಡಿಕೆಗೆ ಪಿಪಿಎಫ್ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಸರ್ಕಾರವು ಶೇ.7.1ರ ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ. ಇದರಲ್ಲಿ ಹೂಡಿಕೆ ಮಾಡಿದ್ರೆ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿಯ ಲಾಭವೂ ಇದೆ.
ಕೇಂದ್ರ ಸರ್ಕಾರ 2023-24ನೇ ಹಣಕಾಸು ವರ್ಷದ ಕೇಂದ್ರ ಬಜೆಟ್‌ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಘೋಷಿಸಿತ್ತು. ಈ ಸ್ಕೀಮ್‌ನಲ್ಲಿ ಶೇ.7.5ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಇದರಲ್ಲಿ ಮಹಿಳೆಯರು 2 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು ಮತ್ತು ಅದರ ಅವಧಿ ಕೂಡ 2 ವರ್ಷಗಳು.
ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯನ್ನು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಮಾಡಲಾಗಿದೆ. ಇದರಲ್ಲಿ 10 ವರ್ಷದವರೆಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಬಹುದು. 250 ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಸದ್ಯ ಸರ್ಕಾರ ಶೇ.8ರಷ್ಟು ಬಡ್ಡಿ ನೀಡುತ್ತಿದೆ.
ನ್ಯಾಶನಲ್ ಸೇವಿಂಗ್ ಸರ್ಟಿಫಿಕೇಟ್ ಎಂಬ ಈ ಯೋಜನೆ ಕೂಡ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕನಿಷ್ಠ 1000 ರೂಪಾಯಿಯನ್ನು ಹೂಡಿಕೆ ಮಾಡಬಹುದು. ಶೇ.7.7 ರಷ್ಟು ಬಡ್ಡಿಯನ್ನು ಈ ಠೇವಣಿಗೆ ನೀಡಲಾಗುತ್ತದೆ. ಹೂಡಿಕೆದಾರರು ಐದು ವರ್ಷಗಳ ಅವಧಿಗೆ ಇದರಲ್ಲಿ ಹೂಡಿಕೆ ಮಾಡಬಹುದು.
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟಿಂಗ್ ಸ್ಕೀಮ್ ಎಂಬ ಯೋಜನೆ ಕೂಡ ಮಹಿಳೆಯರಿಗೆ ಹೇಳಿ ಮಾಡಿಸಿದಂತಿದೆ. ಅಂಚೆ ಕಚೇರಿಯ ಈ ಠೇವಣಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಇದಕ್ಕೆ ಶೇ.7.5ರ ದರದಲ್ಲಿ ಸರಕಾರ ಬಡ್ಡಿ ನೀಡುತ್ತದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಬೇಕು.