ಮೊಬೈಲ್ ಈಗ ಜೀವನದ ಅತ್ಯಮೂಲ್ಯ ವಸ್ತುಗಳಲ್ಲಿ ಒಂದಾಗಿದೆ. ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಮೊಬೈಲ್ ನಲ್ಲಿರುವ ಅನೇಕ ಅಪ್ಲಿಕೇಷನ್ ಗಳು ಜನರ ನಿದ್ರೆ ಹಾಳು ಮಾಡ್ತಿವೆ. ಜನರ ನಿದ್ರೆಗೆ ಅಡ್ಡಿಯಾಗ್ತಿರುವ ಕೆಲ ಅಪ್ಲಿಕೇಷನ್ ಪಟ್ಟಿಯನ್ನು ಸ್ಲೀಪ್ ಜಂಕಿ ಸಮೀಕ್ಷೆಯ ವರದಿ ಬಹಿರಂಗಪಡಿಸಿದೆ. ವರದಿ ಪ್ರಕಾರ, ಪಟ್ಟಿಯಲ್ಲಿ ಚೀನಾದ ಟಿಕ್-ಟಾಕ್ ಅಪ್ಲಿಕೇಶನ್ ಮೊದಲ ಸ್ಥಾನದಲ್ಲಿದೆ. ಅದರ ನಂತ್ರ ಇನ್ಸ್ಟಾಗ್ರಾಮ್, ಸ್ನ್ಯಾಪ್ ಚಾಟ್, ಟ್ವೀಟರ್, ಫೇಸ್ಬುಕ್ ಸೇರಿದೆ. ಇದಲ್ಲದೆ ಪಿನ್ಟರೆಸ್ಟ್, ಯುಟ್ಯೂಬ್, ರೆಡಿಟ್ ಕೂಡ ಪಟ್ಟಿಯಲ್ಲಿದೆ.
ಈ ಅಪ್ಲಿಕೇಷನ್ ಗಳು ಶೇಕಡಾ 78ರಷ್ಟು ಜನರ ನಿದ್ರೆ ಹಾಳು ಮಾಡ್ತಿವೆ. ಯುಟ್ಯೂಬನ್ನು ಶೇಕಡಾ 85.8ರಷ್ಟು ಜನರು ಬಳಸುತ್ತಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಶೇಕಡಾ 75.7ರಷ್ಟು ಮಂದಿ ಫೇಸ್ಬುಕ್‌ನಲ್ಲಿ ಸಕ್ರಿಯರಾಗಿದ್ದಾರೆ. ಶೇಕಡಾ 70.6ರಷ್ಟು ಜನರು ಇನ್ಸ್ಟಾಗ್ರಾಮ್ ಮತ್ತು ಶೇಕಡಾ 50.6ರಷ್ಟು ಜನರು ಟ್ವೀಟರ್ ಬಳಸುತ್ತಿದ್ದಾರೆ.
ದೇಶದಲ್ಲಿ ಒಟ್ಟು 624 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು, ಈ ಪೈಕಿ 448 ಮಿಲಿಯನ್ ಬಳಕೆದಾರರು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ. 2021 ರಲ್ಲಿ, ಭಾರತದಲ್ಲಿ ಶೇಕಡಾ 31ರಷ್ಟು ಸಾಮಾಜಿಕ ಮಾಧ್ಯಮ ಹೆಚ್ಚಾಗಿದೆ. ಶೇಕಡಾ 8 ರಷ್ಟು ಇಂಟರ್ನೆಟ್ ಬಳಕೆದಾರರು ಹೆಚ್ಚಾಗಿದ್ದಾರೆ.
ಇಂಟರ್ನೆಟ್, ಸಾಮಾಜಿಕ ಜಾಲತಾಣ ಬಳಕೆ ಮಾಡುವ ಜನರು ತಡವಾಗಿ ಮಲಗುತ್ತಿದ್ದಾರೆ. ಇದ್ರಿಂದಾಗಿ ನಿದ್ರೆ ಹಾಳಾಗ್ತಿದೆ. ಬೆಳಿಗ್ಗೆ ಆಯಾಸ, ಸುಸ್ತು ಅವರನ್ನು ಕಾಡುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಹೆಚ್ಚೆಚ್ಚು ನೋಡುವ ಕಾರಣ ಕಣ್ಣಿನ ಸಮಸ್ಯೆ ಕಾಡ್ತಿದೆ. ನಿದ್ರಾಹೀನತೆಯಿಂದ ಕಣ್ಣಿನ ನೋವು, ಉರಿ ಸರ್ವೆ ಸಾಮಾನ್ಯವಾಗಿದೆ. ಇದಲ್ಲದೆ ಮಾನಸಿಕ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತಿದೆ.