
ಸನಾತನ ಧರ್ಮದಲ್ಲಿ ಈಶ್ವರನನ್ನು ದೇವಾನುದೇವ ಎಂದು ಕರೆಯಲಾಗುತ್ತದೆ. ಶಿವನನ್ನು ಬಹುಬೇಗ ಮತ್ತು ಸುಲಭವಾಗಿ ಸಂತೋಷಪಡಿಸಬಹುದು ಎಂಬುದು ಭಕ್ತರ ನಂಬಿಕೆ. ಹಾಗಾಗಿ ಸೋಮವಾರ ಶಿವಭಕ್ತರು ಆತನನ್ನು ಆರಾಧಿಸುತ್ತಾರೆ. ಸೋಮವಾರ ಶಿವಲಿಂಗಕ್ಕೆ ನೀರನ್ನು ಅರ್ಪಿಸಿದರೆ ಭಗವಂತನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದೆ.
ಕೆಲವೊಮ್ಮೆ ಶಿವಲಿಂಗ ಪೂಜೆಯ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳಾಗುತ್ತವೆ. ಭೋಲೇನಾಥನಿಗೆ ಇಷ್ಟವಿಲ್ಲದ ವಸ್ತುಗಳನ್ನು ನಾವು ಲಿಂಗಕ್ಕೆ ಅರ್ಪಿಸಿಬಿಡುತ್ತೇವೆ. ಹೀಗೆ ಮಾಡುವುದರಿಂದ ಪೂಜೆಯು ಫಲಪ್ರದವಾಗುವುದಿಲ್ಲ. ಶಿವಲಿಂಗಕ್ಕೆ ಅಪ್ಪಿತಪ್ಪಿಯೂ ಕೆಲವು ವಸ್ತುಗಳನ್ನು ಅರ್ಪಿಸಬಾರದು. ಅವುಗಳ ಬಗ್ಗೆ ತಿಳಿದುಕೊಳ್ಳೋಣ.
ಕುಂಕುಮ – ಶಿವಲಿಂಗಕ್ಕೆ ಕುಂಕುಮವನ್ನು ಎಂದಿಗೂ ಹಚ್ಚಬಾರದು. ಏಕೆಂದರೆ ಕುಂಕುಮ ಅಥವಾ ಸಿಂಧೂರ ಮಹಿಳೆಯರಿಗೆ ಸಂಬಂಧಿಸಿದ್ದು. ಈ ಕುರಿತ ಉಲ್ಲೇಖ ಶಿವಪುರಾಣದಲ್ಲಿಯೂ ಇದೆ.
ಅರಿಶಿನ – ಸಾಮಾನ್ಯವಾಗಿ ಎಲ್ಲಾ ಪೂಜೆಗಳಲ್ಲೂ ನಾವು ಅರಿಶಿವನ್ನು ಬಳಸುತ್ತೇವೆ. ಆದರೆ ಶಿವಲಿಂಗಕ್ಕೆ ಅರಿಶಿನವನ್ನು ಹಚ್ಚಬಾರದು. ಅರಿಶಿನ ಹಚ್ಚಿದರೆ ಪೂಜೆಯ ಪೂರ್ಣ ಫಲಿತಾಂಶ ಸಿಗುವುದಿಲ್ಲ.
ತುಳಸಿ – ತುಳಸಿ ಪೂಜೆಗೆ ಅತ್ಯಂತ ಶ್ರೇಷ್ಠವಾದದ್ದು.ವಿಷ್ಣುವಿನ ಆರಾಧನೆ ಸಂದರ್ಭದಲ್ಲಿ ತುಳಸಿಯನ್ನು ಅರ್ಪಿಸಲಾಗುತ್ತದೆ. ಆದರೆ ಶಿವಲಿಂಗಕ್ಕೆ ತುಳಸಿ ಅರ್ಪಿಸಬಾರದು. ಪುರಾಣದ ಪ್ರಕಾರ, ವೃಂದಾಳ (ತುಳಸಿ) ಪತಿ ಅಂದರೆ ರಾಕ್ಷಸ ಜಲಂಧರನನ್ನು ಭೋಲೆನಾಥನು ಸಂಹಾರ ಮಾಡಿದ್ದನು. ಇದರಿಂದಾಗಿ ವೃಂದಾ ಶಿವನನ್ನು ಶಪಿಸಿದ್ದಳಂತೆ.
ಎಳನೀರು – ಶಿವಲಿಂಗದ ಪೂಜೆಯ ಸಮಯದಲ್ಲಿ ಎಳನೀರನ್ನು ಅರ್ಪಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಶಿವನಿಗೆ ಅಪ್ಪಿತಪ್ಪಿಯೂ ಎಳನೀರನ್ನು ಅರ್ಪಿಸಬೇಡಿ. ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸುವುದು ಕೂಡ ಶುಭಕರವಲ್ಲ. ಇದರಿಂದ ಶಿವ ಕೋಪಗೊಳ್ಳುತ್ತಾನೆಂದು ಹೇಳಲಾಗುತ್ತದೆ.