ಬೆಂಗಳೂರು: ರೈಲುಗಳಲ್ಲಿ ನಕಲಿ ಟಿಕೆಟ್ ತಡೆ ಉದ್ದೇಶದಿಂದ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ವಿಶಿಷ್ಟ ಕ್ಯೂಆರ್ ಕೋಡ್ ಹೊಂದಿರುವ ಟಿಕೆಟ್ ವಿತರಿಸುತ್ತಿದೆ. ವಿಶೇಷವಾಗಿ ಇವುಗಳನ್ನು ಥರ್ಮಲ್ ಪ್ರಿಂಟರ್ ಗಳ ಮೂಲಕ ಮುದ್ರಣ ಮಾಡಲಾಗುತ್ತಿದೆ.
ಮೆಜೆಸ್ಟಿಕ್ ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣದ ಮುಖ್ಯ ದ್ವಾರದಲ್ಲಿರುವ ಎರಡು ಕೌಂಟರ್ ಗಳಲ್ಲಿ ಎರಡು ಥರ್ಮಲ್ ಪ್ರಿಂಟರ್ ಗಳ ಬಳಕೆ ಆರಂಭಿಸಲಾಗಿದೆ. ಕೆಆರ್ ಪುರಂ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಯಶವಂತಪುರ ರೈಲು ನಿಲ್ದಾಣಗಳಲ್ಲಿಯೂ ಈ ನೂತನ ಟಿಕೆಟ್ ವ್ಯವಸ್ಥೆ ಆರಂಭಿಸಲಾಗಿದ್ದು, ಭಾನುವಾರದಿಂದ ಥರ್ಮಲ್ ಪ್ರಿಂಟರ್ ಬಳಸಿ 100 ಟಿಕೆಟ್ ನೀಡಲಾಗಿತ್ತು. ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ. ಮುಂದಿನ 10 ತಿಂಗಳಲ್ಲಿ ಎಲ್ಲಾ ವಿಭಾಗಗಳಲ್ಲಿ ಥರ್ಮಲ್ ಪ್ರಿಂಟರ್ ಬಳಕೆ ಮಾಡಲಾಗುವುದು.
ಇತ್ತೀಚಿಗೆ ಮುದ್ರಣ ಯಂತ್ರಗಳನ್ನು ಬಳಸಿ ನಕಲಿ ಟಿಕೆಟ್ ಗಳನ್ನು ಮಾಡುವ ಪ್ರಕರಣ ಹೆಚ್ಚಾಗಿದ್ದು, ಇದನ್ನು ತಡೆಯಲು ರೈಲ್ವೆ ಇಲಾಖೆ ಥರ್ಮಲ್ ಪ್ರಿಂಟರ್ ಬಳಸಿ ಟಿಕೆಟ್ ಮುದ್ರಿಸುತ್ತಿದೆ. ಪ್ರತಿ ಟಿಕೆಟ್ ಗೆ ವಿಶಿಷ್ಟವಾದ ಕ್ಯೂಆರ್ ಕೋಡ್ ಇರಲಿದ್ದು, ತಪಾಸಣೆ ಅಧಿಕಾರಿಗಳು ತಮ್ಮ ಆ್ಯಪ್ ಮೂಲಕ ಇದನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಕೇವಲ ಮೂರು ಸೆಕೆಂಡ್ ನಲ್ಲಿ ಥರ್ಮಲ್ ಪ್ರಿಂಟರ್ ಟಿಕೆಟ್ ನೀಡುತ್ತದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.