ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಹೆಗ್ಗಳಿಕೆ ಹೊಂದಿರುವ ರಮೇಶ್ ಜಿಗಜಿಣಗಿ, ಈ ಬಾರಿಯ ಕೇಂದ್ರ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಂಗಳವಾರದಂದು ನಡೆದ ಸಂಸದರ ಕಚೇರಿಯ ಪೂಜಾ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆಯಾಗುವ ಸಂದರ್ಭದಲ್ಲಿಯೇ ನನ್ನ ಅನೇಕ ಸ್ನೇಹಿತರು ಆ ಪಕ್ಷ ದಲಿತ ವಿರೋಧಿ. ಸೇರ್ಪಡೆಯಾಗುವುದು ಬೇಡ ಎಂದು ಹೇಳಿದ್ದರು. ಇಷ್ಟಾದರೂ ನಾನು ಆ ಪಕ್ಷಕ್ಕೆ ಸೇರ್ಪಡೆಗೊಂಡೆ ಎಂದು ರಮೇಶ್ ಜಿಗಜಿಣಗಿ ಹೇಳಿದರು.
ಈಗಿನ ಕೇಂದ್ರ ಸಂಪುಟದಲ್ಲಿ ಮೇಲ್ಜಾತಿಯವರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ದಕ್ಷಿಣ ಭಾರತದಿಂದ ಏಳು ಬಾರಿ ದಲಿತ ಸಂಸದನಾಗಿ ಆಯ್ಕೆಯಾಗಿರುವ ತಮಗೆ ಸಚಿವ ಸ್ಥಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದಲಿತರು ಬಿಜೆಪಿಗೆ ಮತ ನೀಡಿಲ್ಲವೇ ಎಂದು ಪ್ರಶ್ನಿಸಿದರು.
ನಾನು ವೈಯಕ್ತಿಕವಾಗಿ ಸಚಿವ ಸ್ಥಾನ ಕೇಳುತ್ತಿಲ್ಲ. ಆದರೆ ನನ್ನ ಕ್ಷೇತ್ರದ ಜನತೆ ನಾನು ಸಚಿವನಾಗುವುದನ್ನು ಬಯಸಿದ್ದಾರೆ. ಈಗ ಕ್ಷೇತ್ರಕ್ಕೆ ಹೋದರೆ ನನಗೆ ಚೀ, ಥೂ ಎನ್ನುತ್ತಿದ್ದಾರೆ ಎಂದು ರಮೇಶ್ ಜಿಗಜಿಣಗಿ ತಮ್ಮ ಬೇಸರ ವ್ಯಕ್ತಪಡಿಸಿದರು. ಮೈತ್ರಿ ಪಕ್ಷಗಳ ಸಹಕಾರದಿಂದ ಸರ್ಕಾರ ರಚಿಸಿರುವ ಬಿಜೆಪಿಗೆ ಈಗ ಸ್ವಪಕ್ಷೀಯ ಸಂಸದರೇ ತಿರುಗಿ ಬಿದ್ದಿರುವುದು ತಲೆಬಿಸಿಯನ್ನುಂಟು ಮಾಡಿದೆ.