ದಾವಣಗೆರೆ : ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ, ಲೋಡ್ ಶೆಡ್ಡಿಂಗ್ ಮಾಡಲ್ಲ ಎಂದು ಇಂಧನ ಸಚಿವ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.ಕೃಷಿಗೆ 7 ತಾಸು ತ್ರಿಫೇಜ್ ವಿದ್ಯುತ್ ಮತ್ತು ಗೃಹ ಬಳಕೆ ಹಾಗೂ ಕೈಗಾರಿಕೆಗೆ ದಿನದ 24 ಗಂಟೆಗಳೂ ವಿದ್ಯುತ್ ಪೂರೈಕೆ ಮಾಡುವುದು ಸರ್ಕಾರದ ನೀತಿಯಾಗಿದ್ದು ಇದಕ್ಕೆ ಬದ್ದವಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂಧನ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ, ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕೆಲವೇ ಸ್ಥಳಗಳಲ್ಲಿ ಮಾತ್ರ ನಿರ್ವಹಣೆಗಾಗಿ ಕಡಿತ ಮಾಡಲಾಗುತ್ತದೆ. ಆದರೆ ಸರ್ಕಾರದ ಬದ್ದತೆಯಂತೆ ಕೃಷಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ, ಆದರೆ ಲೋಡ್ಶೆಡ್ಡಿಂಗ್ ಜಾರಿಯಲ್ಲಿರುವುದಿಲ್ಲ ಎಂದರು.
ರಾಜ್ಯದಲ್ಲಿ ಪ್ರತಿನಿತ್ಯ 18500 ಮೆಗಾವ್ಯಾಟ್ ಬೇಡಿಕೆ ಇದ್ದು ಬೇಸಿಗೆ ಆರಂಭವಾಗಿರುವುದರಿಂದ ಸರಾಸರಿಗಿಂತ ಶೇ 10 ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುವುದರಿಂದ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್ ಬ್ಯಾಂಕಿಂಗ್ ಮಾಡಿಕೊಂಡು ಜೂನ್ನಿಂದ ಆ ರಾಜ್ಯಗಳಿಗೆ ಕರ್ನಾಟಕದಿಂದ ವಿದ್ಯುತ್ ನೀಡಿ ಬೇಸಿಗೆಯಲ್ಲಿ ಅಲ್ಲಿಂದ ಗ್ರಿಡ್ ಮೂಲಕ ವಿದ್ಯುತ್ ಪಡೆಯಲು ಉದ್ದೇಶಿಸಲಾಗಿದೆ. ಗುಣಮಟ್ಟದ ವೋಲ್ಟೇಜ್ಗಾಗಿ ಅಗತ್ಯವಿರುವ ಕಡೆ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
3 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ; ಕುಸುಮ್-ಸಿ ಯೋಜನೆಯ ಮೂಲಕ ಮುಂದಿನ ಒಂದೂವರೆ ವರ್ಷದಲ್ಲಿ ಸೋಲಾರ್ನಿಂದ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಈಗಾಗಲೇ ಕುಸುಮ್ ಯೋಜನೆಯಡಿ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿದ್ದು ಸೋಲಾರ್ ಪ್ಯಾನಲ್ ಅಳವಡಿಕೆ, ವಿದ್ಯುತ್ ಉತ್ಪಾದನೆ ಹಂತ, ಭೂಮಿ ಸಮತಟ್ಟು ಮಾಡುವ ಕೆಲಸ ಪ್ರಗತಿಯಲ್ಲಿದ್ದು ಬರುವ ಏಪ್ರಿಲ್ನಲ್ಲಿ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್ಗೆ ಕಳುಹಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಎಸ್ಕಾಂಗಳು ನಷ್ಟದಲ್ಲಿಲ್ಲ; ಇಂಧನ ಇಲಾಖೆಯಲ್ಲಿನ ಯಾವುದೇ ಎಸ್ಕಾಂಗಳು ನಷ್ಟದಲ್ಲಿಲ್ಲ, ಆದರೆ ಸರ್ಕಾರದಿಂದ ಸಾಕಷ್ಟು ಹಣ ಬರಬೇಕಾಗಿದೆ. ಸ್ಥಳೀಯ ಸಂಸ್ಥೆಗಳು ಸೇರಿದಂತೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಕಂಪನಿಗಳಿಗೆ ಬರಬೇಕಾದ ಹಣ ಬಾಕಿ ಇದೆ. ಗ್ರಾಮ ಪಂಚಾಯಿತಿಗಳು ಸ್ವಂತವಾಗಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಯೋಜನೆ ಇದ್ದು ದಾವಣಗೆರೆ ಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಉದ್ದೇಶಿಸಿ ಇದನ್ನು ಪೈಲೆಟ್ ಕಾರ್ಯಕ್ರಮವಾಗಿ ರೂಪಿಸಲಾಗುತ್ತದೆ. ಪಂಚಾಯಿತಿಗಳು ಕುಡಿಯುವ ನೀರು ಪೂರೈಕೆ, ಬೀದಿದೀಪಗಳಿಗೆ ಅಗತ್ಯವಿರುವ ವಿದ್ಯುತ್ನ್ನು ಉತ್ಪಾದನೆ ಮಾಡಿಕೊಂಡು ಸ್ವಾವಲಂಬಿಯಾಗಬೇಕು. ಇದಕ್ಕಾಗಿ 400 ಎಕರೆ ಜಾಗವನ್ನು ಗುರುತಿಸಿ ಸೋಲಾರ್ ಪ್ಯಾನಲ್ ಅಳವಡಿಸಿ ಗ್ರಿಡ್ಗೆ ವಿದ್ಯುತ್ ನೀಡಿ ಅಷ್ಟೆ ವಿದ್ಯುತ್ನ್ನು ವಾಪಸ್ ನೀಡಲಾಗುತ್ತದೆ. ಇದರಿಂದ ವಿದ್ಯುತ್ ಉಳಿತಾಯವಾಗಲಿದೆ ಮತ್ತು ಪಂಚಾಯಿತಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದರು.
ವಿದ್ಯುತ್ ದರ ಪರಿಷ್ಕರಣೆ ಕೆಇಆರ್ಸಿಗೆ; ಎಲ್ಲಾ ಎಸ್ಕಾಂಗಳ ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಕೆಇಆರ್ಸಿ ಮಾಡಲಿದೆ. ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪಡೆಯುವ ಮೂಲಕ ದರ ಏರಿಕೆ ನಿರ್ಣಯಗಳನ್ನು ಕೆಇಆರ್ಸಿ ನಿರ್ಧರಿಸಲಿದೆ. ಯಾರದೂ ಕೂಡ ಹಸ್ತಕ್ಷೇಪ ಇರುವುದಿಲ್ಲ, ಕಳೆದ ವರ್ಷ ಯಾವುದೇ ವಿದ್ಯುತ್ ದರ ಏರಿಕೆ ಮಾಡಿರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.