ಬೆಂಗಳೂರು : ನಾನು ಯಾವುದೇ ತಪ್ಪು ಮಾಡಿಲ್ಲ, ಮುಂದೆ ತಪ್ಪು ಮಾಡುವುದೂ ಇಲ್ಲ. 40 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಒಂದು ‘ಕಪ್ಪುಚುಕ್ಕಿ’ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ.
ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. : ತಪ್ಪು ಮಾಡುವುದೂ ಇಲ್ಲ. ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ. ರಾಜಕೀಯ ದುರುದ್ದೇಶದಿಂದ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎಂದರು.
ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾಗ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲವೇ? ಈಗ ಸಿದ್ದರಾಮಯ್ಯನವರು ಯಾಕೆ ರಾಜೀನಾಮೆ ನೀಡುತ್ತಿಲ್ಲ?’’ ಎಂದು ವಿರೋಧಪಕ್ಷದ ನಾಯಕರಾದ ಆರ್.ಅಶೋಕ್ ಅವರು ಮತ್ತೊಮ್ಮೆ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ.
ಅಶೋಕ್ ಅವರೇ, ಈ ರೀತಿ ಬೇಕಾಬಿಟ್ಟಿ ಹೇಳಿಕೆ ನೀಡುವ ಮೊದಲು ವಾಸ್ತವಾಂಶವನ್ನು ಪರಿಶೀಲಿಸಿಕೊಂಡು ಮಾತನಾಡಿ. ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ರಾಚೇನಹಳ್ಳಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು 2011ರ ಜನವರಿ 21ರಂದು. ಅವರ ವಿರುದ್ಧ ಅರ್ಜಿದಾರರು ನೀಡಿದ್ದ 1600 ಪುಟಗಳ ಪ್ರಬಲ ದಾಖಲೆಗಳ ಸಾಕ್ಷ ಕೂಡಾ ಇತ್ತು. ಹಾಗಿದ್ದರೂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಅಶೋಕ್ ಅವರೇ, ಆ ಕಾಲದಲ್ಲಿ ನೀವೇ ಅಲ್ಲವೇ ಯಡಿಯೂರಪ್ಪನವರು ರಾಜೀನಾಮೆ ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದವರು. ಈಗ ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ? ಎಂದು ಸಿಎಂ ಪ್ರಶ್ನಿಸಿದ್ದಾರೆ.