ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಆಯುರ್ವೇದದ ಪ್ರಕಾರ ವಾತದಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆ.
ನಿಯಮಿತ ಹಾಗೂ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಿದ್ರೆ ಈ ಬೆನ್ನು ನೋವಿನಿಂದ ಆರಾಮವಾಗಿ ಮುಕ್ತಿ ಪಡೆಯಬಹುದಾಗಿದೆ. ಯಾವ ಆಹಾರ ಸೇವನೆ ಮಾಡಿದ್ರೆ ಬೆನ್ನು ನೋವಿನ ಸಮಸ್ಯೆ ಕಡಿಮೆಯಾಗುತ್ತದೆ ಎಂಬುದನ್ನೂ ಆಯುರ್ವೇದದಲ್ಲಿ ಹೇಳಲಾಗಿದೆ.
ಫೈಬರ್ ಅಂಶವಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಮಲಬದ್ಧತೆ, ಹೊಟ್ಟೆ ಸಮಸ್ಯೆ ಹಾಗೂ ಬೆನ್ನು ನೋವಿನ ನಡುವೆ ಸಂಬಂಧವಿದೆ. ಫೈಬರ್ ಅಂಶ ಜಾಸ್ತಿ ಇರುವ ಆಹಾರ ಸೇವನೆ ಮಾಡುವುದರಿಂದ ಈ ಎಲ್ಲ ಸಮಸ್ಯೆಯಿಂದ ನೆಮ್ಮದಿ ಪಡೆಯಬಹುದಾಗಿದೆ.
ಬೆನ್ನು ನೋವನ್ನು ಗುಣ ಮಾಡುವ ಶಕ್ತಿ ಅರಿಶಿನಕ್ಕಿದೆ. ಊತವನ್ನು ಇದು ಕಡಿಮೆ ಮಾಡುತ್ತದೆ. ಹಾಗೆ ಸ್ನಾಯು ಸಮಸ್ಯೆಯಿಂದ ಆರಾಮ ನೀಡುತ್ತದೆ. ಬೆನ್ನು ನೋವಿನಿಂದ ಬಳಲುತ್ತಿರುವವರು ಅರಿಶಿನ ಪುಡಿಯನ್ನು ಆಹಾರದಲ್ಲಿ ಅಗತ್ಯವಾಗಿ ಬಳಕೆ ಮಾಡಬೇಕು.
ಬೆಳ್ಳುಳ್ಳಿಯಲ್ಲಿ ನೋವು ನಿವಾರಕ ಶಕ್ತಿ ಅಪಾರ ಪ್ರಮಾಣದಲ್ಲಿದೆ. ಬೆಳ್ಳುಳ್ಳಿಯನ್ನು ತೆಂಗಿನ ಎಣ್ಣೆಯಲ್ಲಿ ಬಿಸಿ ಮಾಡಿ ಅದನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ನೋವು ಕಡಿಮೆಯಾಗುವ ಜೊತೆಗೆ ಮಾಂಸಖಂಡಗಳ ಬಿಗಿತ ಕಡಿಮೆಯಾಗುತ್ತದೆ.
ಆಯುರ್ವೇದದ ಪ್ರಕಾರ ಮಸಾಲೆ ಟೀ ಸೇವನೆ ಮಾಡುವುದರಿಂದ ನೋವು ಹಾಗೂ ಮಲಬದ್ಧತೆಯಿಂದ ಮುಕ್ತಿ ಸಿಗುತ್ತದೆ.
ಸಾಮಾನ್ಯವಾಗಿ ಕ್ಯಾಲ್ಸಿಯಂ ಕೊರತೆಯಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಡೈರಿ ಉತ್ಪನ್ನದಲ್ಲಿರುವ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಮೂಳೆಗಳನ್ನು ಬಲಪಡಿಸುತ್ತದೆ.