
ವಯಸ್ಸಾದಂತೆ ದೇಹವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳ ಕೊರತೆಯಿಂದಾಗಿ ದೇಹವು ಕ್ರಮೇಣ ಸಂಪೂರ್ಣವಾಗಿ ಟೊಳ್ಳಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಪ್ರಾರಂಭವಾಗುವ ಸಮಸ್ಯೆ ಇದು. ಬೆನ್ನುನೋವಿಗೆ ಮನೆಯಲ್ಲೇ ಕೆಲವೊಂದು ಪರಿಹಾರಗಳಿವೆ. ನಮ್ಮ ಅಡುಗೆಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳ ಸೇವನೆಯಿಂದ ಬೆನ್ನು ನೋವನ್ನು ನಿವಾರಿಸಿಕೊಳ್ಳಬಹುದು.
ಗ್ರೀನ್ ಟೀ
ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಬೆನ್ನುನೋವಂತೂ ಸರ್ವೇ ಸಾಮಾನ್ಯ. ಇದರಿಂದ ಮುಕ್ತಿ ಪಡೆಯಲು ನಿಯಮಿತವಾಗಿ ಗ್ರೀನ್ ಟೀ ಸೇವನೆ ಮಾಡಿ.
ಕಲ್ಲುಪ್ಪು
ಕಲ್ಲು ಉಪ್ಪು ಕೂಡ ಬೆನ್ನು ನೋವನ್ನು ನಿವಾರಿಸಬಲ್ಲದು. ಇದು ದೇಹಕ್ಕೆ ಸಾಕಷ್ಟು ಉಪಶಮನ ನೀಡುತ್ತದೆ. ಕಲ್ಲುಪ್ಪು ಬೆರೆಸಿದ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ನಿಯಮಿತವಾಗಿ ಇದನ್ನು ಮಾಡುತ್ತ ಬಂದರೆ ಬೆನ್ನು ನೋವು ಕಡಿಮೆಯಾಗುತ್ತದೆ.
ದಾಳಿಂಬೆ
ಪದೇ ಪದೇ ಬೆನ್ನು ನೋವು ಕಾಡುತ್ತಿದ್ದರೆ ದಾಳಿಂಬೆಯನ್ನು ಪ್ರತಿದಿನ ಸೇವಿಸಬೇಕು. ದೇಹದಲ್ಲಿ ಕಬ್ಬಿಣಾಂಶಗಳ ಕೊರತೆಯಿಂದ ಕೂಡ ಬೆನ್ನು ನೋವು ಬರುತ್ತದೆ. ದಾಳಿಂಬೆ ಹಣ್ಣು, ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ.
ಮೆಂತ್ಯ ಎಣ್ಣೆ
ಬೆನ್ನು ನೋವು ಬಂದಾಗ ಮೆಂತ್ಯ ಎಣ್ಣೆಯನ್ನು ಹಚ್ಚಿಕೊಳ್ಳಿ. ನಿಧಾನವಾಗಿ ಮಸಾಜ್ ಕೂಡ ಮಾಡಬಹುದು. ಪ್ರತಿದಿನ ಮೆಂತ್ಯ ಎಣ್ಣೆಯಿಂದ ಮಸಾಜ್ ಮಾಡಿಕೊಂಡಲ್ಲಿ ಬೆನ್ನು ನೋವಿನಿಂದ ಉಪಶಮನ ಸಿಗುತ್ತದೆ.
ಓಮ
ಓಮ ಕೂಡ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಪ್ರತಿ ಅಡುಗೆ ಮನೆಯಲ್ಲೂ ಲಭ್ಯವಿರುವ ಮಸಾಲೆ ಪದಾರ್ಥ ಇದು. ಓಮವನ್ನು ಪ್ರತಿದಿನ ಸೇವಿಸುವುದರಿಂದ ಬೆನ್ನು ನೋವಿನಿಂದ ತಕ್ಷಣದ ಪರಿಹಾರ ದೊರೆಯುತ್ತದೆ.