ಆಹಾರದ ಅಜೀರ್ಣ ಸಮಸ್ಯೆ ಅನಾರೋಗ್ಯಕ್ಕೆ ಮೂಲವಾಗುತ್ತದೆ. ತಿಂದ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗದೇ ಹೋದರೆ ಅದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಹಾಗೂ ಚರ್ಮದ ಕಾಂತಿಯ ಮೇಲೂ ಪ್ರಭಾವ ಬೀರುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಹೀಗಾಗಿ ಅಜೀರ್ಣ ಸಮಸ್ಯೆಯಿಂದ ಬಳಲುವವರು ಮನೆಯ ಔಷಧದಿಂದಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಅಂಗಡಿಯಲ್ಲಿ ಸಿಗುವ ಬಾಟಲಿ ಸೋಡಾಗೆ ಒಂದು ಚಮಚ ಶುಂಠಿ ರಸ ಮತ್ತು ಒಂದು ಚಮಚ ನಿಂಬೆ ಸೇರಿಸಿ ಕುಡಿಯಬೇಕು. ಅಗತ್ಯವಿದ್ದರೆ ಒಂದು ಚಮಚದಷ್ಟು ಉಪ್ಪು ಅಥವಾ ಸಕ್ಕರೆ ಸೇರಿಸಿಕೊಳ್ಳಬಹುದು. ಇನ್ನು ಪ್ರತಿ ದಿನ ರಾತ್ರಿ ಒಂದು ಸಿಪ್ಪೆ ಸಹಿತ ಏಲಕ್ಕಿಯನ್ನು ಬಾಳೆಹಣ್ಣಿನೊಂದಿಗೆ ಸೇವಿಸುವುದರಿಂದ ಅಜೀರ್ಣ ನಿವಾರಿಸಿಕೊಳ್ಳಬಹುದು.
ಹಸಿ ಮೂಲಂಗಿಯನ್ನು ಚಿಕ್ಕದಾಗಿ ಹೆಚ್ಚಿಕೊಂಡು ಅದಕ್ಕೆ ಒಂದು ಚಮಚ ಕರಿಮೆಣಸಿನ ಪುಡಿ, ಒಂದು ಚಮಚ ನಿಂಬೆರಸ ಹಾಗೂ ರುಚಿಗೆ ತಕ್ಕಷ್ಟು ಅಡುಗೆ ಉಪ್ಪು ಬೆರೆಸಿಕೊಂಡು ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇನ್ನು ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿದರೆ ಕಾಳು ಮೆಣಸಿನ ಪುಡಿ ಹಾಗೂ ಜೀರಿಗೆ ಪುಡಿ ನೀರಿಗೆ ಹಾಕಿ ಕುದಿಸಿ ಅದಕ್ಕೆ ಉಪ್ಪು ಬೆರೆಸಿ ಕುಡಿಯುವುದರಿಂದ ಹೊಟ್ಟೆ ಹಗುರವಾಗುವುದು. ಆದರೆ ದೀರ್ಘ ಕಾಲದ ಅಜೀರ್ಣ ಸಮಸ್ಯೆಗೆ ನಿಯಮಿತವಾದ ಜೀವನಶೈಲಿ, ಹೆಚ್ಚು ಮಸಾಲೆಯಿಲ್ಲದ ಆಹಾರ ಹಾಗೂ ವ್ಯಾಯಾಮ ಮಾತ್ರ ಪರಿಣಾಮಕಾರಿಯಾಗಬಲ್ಲದು.