ಬಣ್ಣಬಣ್ಣದ ಚಿಟ್ಟೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ಚಿಟ್ಟೆಗಳು ತಮ್ಮ ಪ್ರಕಾಶಮಾನವಾದ ಮತ್ತು ವಿಶೇಷ ಬಣ್ಣಗಳನ್ನು ಬಳಸುತ್ತವೆ. ಅಷ್ಟೇ ಅಲ್ಲ ಚಿಟ್ಟೆಗಳು ಹಾರುವ ರೀತಿಯನ್ನು ಸಹ ಅನುಕರಿಸುತ್ತವೆ. ಇತ್ತೀಚಿನ ಸಂಶೋಧನೆಯಲ್ಲಿ ವಿಜ್ಞಾನಿಗಳು ಕೆಲವು ನಿರ್ದಿಷ್ಟ ಬಣ್ಣದ ಚಿಟ್ಟೆಗಳು ತಮ್ಮ ಹಾರುವ ಶೈಲಿಯನ್ನು ಪರಸ್ಪರ ಅನುಕರಿಸುತ್ತವೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಈ ಮೂಲಕ ಚಿಟ್ಟೆಗಳು ಶಿಕಾರಿಯಿಂದ ತಪ್ಪಿಸಿಕೊಳ್ಳುತ್ತವೆ.
ದಕ್ಷಿಣ ಅಮೆರಿಕಾದಲ್ಲಿ ನಡೆಸಿದ ಈ ಅಧ್ಯಯನದಲ್ಲಿ ವಿಜ್ಞಾನಿಗಳು 38 ಜಾತಿಗಳ 351 ಚಿಟ್ಟೆಗಳನ್ನು ಪರೀಕ್ಷಿಸಿದ್ದಾರೆ. ಈ ಜಾತಿಗಳಲ್ಲಿ ಕೆಲವು ದೂರದ ಸಂಬಂಧವನ್ನು ಹೊಂದಿದ್ದವು, ಆದರೆ ಅವುಗಳ ಬಣ್ಣ ಮಾದರಿಗಳು ಹೋಲುತ್ತವೆ. ಚಿಟ್ಟೆಗಳು ಹಾರುವ ಮಾರ್ಗವು ಅವುಗಳ ಆವಾಸಸ್ಥಾನ ಅಥವಾ ರೆಕ್ಕೆಗಳ ಗಾತ್ರಕ್ಕಿಂತ, ಅವುಗಳ ಬಣ್ಣ ಮಾದರಿಗಳೊಂದಿಗೆ ಹೆಚ್ಚು ಸಂಬಂಧ ಹೊಂದಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ದೂರದ ಸಂಬಂಧಿ ಚಿಟ್ಟೆಗಳು ಒಂದೇ ರೀತಿಯ ಬಣ್ಣದ ಮಾದರಿಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಒಂದೇ ರೀತಿಯ ಹಾರುವ ಮಾದರಿಗಳನ್ನು ಸಹ ಅಳವಡಿಸಿಕೊಳ್ಳುತ್ತವೆ. ಇದರಿಂದ ಶಿಕಾರಿಗೆ ಬರುವ ಪರಭಕ್ಷಕಗಳು ಗೊಂದಲಕ್ಕೊಳಗಾಗುತ್ತವೆ. ಈ ಅಧ್ಯಯನವು “ಹೆಲಿಕೋನಿನಿ” ಎಂಬ ಚಿಟ್ಟೆಯ ಗುಂಪಿನ ಮೇಲೆ ಕೇಂದ್ರೀಕರಿಸಿದೆ, ಇದು ಸುಮಾರು 100 ಜಾತಿಗಳನ್ನು ಒಳಗೊಂಡಿದೆ. ಹುಲಿಯಂತಹ ಪಟ್ಟೆಗಳನ್ನು ಹೊಂದಿರುವ “ಇಥೋಮಿನೇ” ಚಿಟ್ಟೆಗಳ ಬಗ್ಗೆ ಸಹ ಸಂಶೋಧನೆ ಮಾಡಲಾಗಿದೆ.
ವಿಕಸನೀಯ ದೃಷ್ಟಿಕೋನದಿಂದ ಒಂದೇ ಬಣ್ಣದ ಮಾದರಿಯನ್ನು ಹಂಚಿಕೊಳ್ಳುವುದು ಅರ್ಥಪೂರ್ಣವಾಗಿದೆ. ಆದರೆ ಹಾರಾಟದ ಮಾದರಿಗಳು ಹೆಚ್ಚು ಸಂಕೀರ್ಣವಾಗಿವೆ ಮತ್ತು ಗಾಳಿಯ ಉಷ್ಣತೆ, ಆವಾಸಸ್ಥಾನದಂತಹ ಅನೇಕ ಇತರ ಅಂಶಗಳಿಂದ ಪ್ರಭಾವಿತವಾಗಿವೆ. ಪರಭಕ್ಷಕಗಳನ್ನು ತಪ್ಪಿಸಲು ವಿವಿಧ ಜಾತಿಗಳು ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆಯು ಸಹಾಯ ಮಾಡುತ್ತದೆ.