ನಾಪತ್ತೆಯಾದ ಡೈವರ್ ಅನ್ನು ಅವರ ಕುಟುಂಬ ಸದಸ್ಯರು ಸಮುದ್ರದಲ್ಲಿ ಕಂಡು ಹಿಡಿದು ರಕ್ಷಿಸಿದ ಅಪರೂಪದ ವಿಡಿಯೋ ವೈರಲ್ ಆಗಿದೆ. ಫ್ಲೋರಿಡಾದ ನಿವಾಸಿ ಪ್ರಿಸ್ಸಿಲ್ಲಾ ಗಾರ್ಟೆನ್‌ಮೇಯರ್ ಟಿಕ್‌ಟಾಕ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇವರ ಸೋದರ ಸಂಬಂಧಿ 22 ವರ್ಷದ ಡೈಲನ್ ಗಾರ್ಟೆನ್‌ಮೇಯರ್ ಅವರು ಡೈವ್ ಮಾಡುವಾಗ ಪ್ರವಾಹಕ್ಕೆ ಸಿಲುಕಿದ್ದರು. ಆದರೆ ಅದೃಷ್ಟವಶಾತ್ ಅವರು ತಾತ್ಕಾಲಿಕ ತೆಪ್ಪದಲ್ಲಿ ತೇಲುತ್ತಿದ್ದರು. ಅವರನ್ನು ರಕ್ಷಿಸಿದ ಕ್ಷಣವನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
ಡೈಲನ್ ಸುಮಾರು 35 ಅಡಿ ಆಳದಲ್ಲಿದ್ದಾಗ ಗಲ್ಫ್ ಸ್ಟ್ರೀಮ್ ಪ್ರವಾಹವು ಆತನನ್ನು ಆಳಕ್ಕೆ ಎಳೆದುಕೊಂಡು ಹೋಗಿದೆ. ಆ ಸಂದರ್ಭದಲ್ಲಿ ದೋಣಿಯಲ್ಲಿದ್ದ ಅವನ ಸ್ನೇಹಿತರಿಂದ ಸುಮಾರು ಒಂದು ಮೈಲಿ ದೂರಕ್ಕೆ ಆತ ತೇಲಿ ಹೋಗಿದ್ದಾನೆ. ಡೈಲನ್ ನೀರಿನಿಂದ ಹೊರಬರದಿದ್ದಾಗ, ಕೋಸ್ಟ್ ಗಾರ್ಡ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಏತನ್ಮಧ್ಯೆ, ಡೈಲನ್ ಅವರ ಕುಟುಂಬವು ಅವನನ್ನು ಹುಡುಕುವ ಭರವಸೆಯಲ್ಲಿ ಅವರ ದೋಣಿಯನ್ನು ತೆಗೆದುಕೊಂಡಿತು. ಈ ಸಂದರ್ಭದಲ್ಲಿ ಡೈಲನ್ನನ್ನು ಕಂಡುಹಿಡಿಯಲಾಗಿದೆ.
ಅದೃಷ್ಟವಶಾತ್, ಅಲ್ಲಿದ್ದ ತಾತ್ಕಾಲಿಕ ತೆಪ್ಪದಲ್ಲಿ ಡೈಲನ್ ತೇಲುತ್ತಿದ್ದನು, ಆತ ಸಿಗುತ್ತಿದ್ದಂತೆಯೆ ಕುಟುಂಬವು ಹರ್ಷೋದ್ಗಾರ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದರ ವಿಡಿಯೋ ವೈರಲ್ ಆಗಿದ್ದು, ಇಂಥ ಸಾಹಸ ಕಾರ್ಯ ಮಾಡುವ ಮೊದಲು ಹಲವು ಬಾರಿ ಯೋಚಿಸುವ ಅಗತ್ಯವಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.