ಊಟದ ನಂತರ ಎಲೆ ಅಡಿಕೆ ಅಂದರೆ ಪಾನ್ ತಿನ್ನುವುದು ಬಹುತೇಕರ ವಾಡಿಕೆ. ರಸವತ್ತಾದ ಪಾನ್ ಜಗಿಯುವ ಖುಷಿಯೇ ಬೇರೆ. ಪಾನ್ ನಲ್ಲಿ ಹಲವಾರು ವೆರೈಟಿಗಳಿವೆ. ಹಾಗಾದರೆ ಈ ಪಾನ್ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ಏನು ಅಂತ ತಿಳಿಯೋಣ.
* ವೀಳ್ಯದೆಲೆಯಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಪಾನ್ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಉಗುರು ಬೆಚ್ಚನೆಯ ನೀರಿನ ಜೊತೆಗೆ ಸ್ವಲ್ಪ ವೀಳ್ಯದೆಲೆಯನ್ನು ತಿಂದರೆ ದೇಹದಲ್ಲಿರುವ ಕಲ್ಮಶಗಳು ಹೋಗುತ್ತವೆ.
* ವೀಳ್ಯದೆಲೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿ ಬೆರೆಸಿ ಸೋಸಿದ ನೀರನ್ನು ಮಕ್ಕಳಿಗೆ ಎರಡು ದಿನಕ್ಕೊಮ್ಮೆ 2 ಟೀ ಸ್ಪೂನ್ ಕುಡಿಸಿದರೆ ಜೀರ್ಣಕ್ರಿಯೆ ಚೆನ್ನಾಗಿ ಆಗಿ ಹಸಿವು ಹೆಚ್ಚುತ್ತದೆ.
* ವೀಳ್ಯದೆಲೆಯಲ್ಲಿ ನೋವನ್ನು ನಿವಾರಿಸುವ ಔಷಧೀಯ ಗುಣಗಳಿದ್ದು, ಈ ಎಲೆಯನ್ನು ಜಜ್ಜಿ ಗಾಯಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ವೀಳ್ಯದೆಲೆಯನ್ನು ಜಗಿದರೂ ಹೊಟ್ಟೆ ನೋವು ಇತ್ಯಾದಿಗಳು ಕಡಿಮೆಯಾಗುತ್ತದೆ.
* ಹೊಟ್ಟೆಯಲ್ಲಿ ಆಮ್ಲೀಯತೆಯಿಂದ ಹೆಚ್ಚು ಕಂಡು ಬರುವ ಹೊಟ್ಟೆ ನೋವಿಗೆ ವೀಳ್ಯದೆಲೆ ಸೇವನೆ ಬೆಸ್ಟ್. ಇದು ಹೊಟ್ಟೆಯ ಪಿ.ಎಚ್ ಲೆವೆಲ್ ಅನ್ನು ಸಮತೋಲನದಲ್ಲಿಡುತ್ತದೆ.
* ಯಾವುದರಲ್ಲೂ ಆಸಕ್ತಿ ಇರದೇ ಒಂದು ರೀತಿಯ ಮಂಕುತನ ಕಾಡುತ್ತಿದ್ದರೆ ವೀಳ್ಯದೆಲೆ ತಿನ್ನಿ. ಇದು ಬುದ್ಧಿಯನ್ನು ಚುರುಕುಗೊಳಿಸುತ್ತದೆ. 1 ಟೀಸ್ಪೂನ್ ವೀಳ್ಯದೆಲೆ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಪ್ರತಿದಿನ ಎರಡು ಬಾರಿ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.
* ಪದೇ ಪದೇ ಕಾಡುವ ತಲೆನೋವಿಗೆ ವೀಳ್ಯದೆಲೆ ಬೆಸ್ಟ್. ವೀಳ್ಯದೆಲೆಯನ್ನು ಜಜ್ಜಿ ಹಣೆಗೆ ಲೇಪಿಸಿದರೆ ನೋವು ಕ್ರಮೇಣ ಕಡಿಮೆಯಾಗುತ್ತದೆ.
* ವೀಳ್ಯದೆಲೆ ಸತತ ಕೆಮ್ಮು ಮತ್ತು ಅದರಿಂದ ಉಂಟಾಗುವ ಉರಿಯನ್ನು ಕಡಿಮೆ ಗೊಳಿಸುತ್ತದೆ.
* ವೀಳ್ಯದೆಲೆಯ ಎಣ್ಣೆಯು ದಂತಕ್ಷಯವನ್ನು ತಡೆಯುತ್ತದೆ. ಬಾಯೊಳಗೆ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆದು ಒಸಡು ಮತ್ತು ಹಲ್ಲನ್ನು ಸದೃಢಗೊಳಿಸುತ್ತದೆ. ವೀಳ್ಯದೆಲೆಯ ಎಣ್ಣೆ ಬೆರೆಸಿದ 1 ಕಪ್ ಬೆಚ್ಚನೆಯ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಬಾಯಿ ದುರ್ವಾಸನೆ ಹೋಗುತ್ತದೆ.