
ಹೂವನ್ನು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ದೇವರ ಪೂಜೆಯಿಂದ ಮನೆ ಅಲಂಕಾರದವರೆಗೆ ಹೂವನ್ನು ಬಳಕೆ ಮಾಡಲಾಗುತ್ತದೆ. ಮನೆಯಲ್ಲಿರುವ ತಾಜಾ ಹೂಗಳು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತವೆ. ಹಾಗೆ ಮನೆಯಲ್ಲಿ ಒಣಗಿದ ಹೂವಿದ್ದರೆ ನಕಾರಾತ್ಮಕ ಶಕ್ತಿಗಳು ಆಕರ್ಷಿಸಲ್ಪಡುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಒಣಗಿದ ಹೂಗಳು ವಾಸ್ತು ದೋಷಕ್ಕೆ ಕಾರಣವಾಗುತ್ತದೆಯಂತೆ. ಮನೆಯಲ್ಲಿ ಒಣಗಿದ ಹೂ ಇಟ್ಟರೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ ಬಾಡಿದ ಹೂ ಮನೆಯ ಶಾಂತಿ, ನೆಮ್ಮದಿಯನ್ನು ಹಾಳು ಮಾಡುತ್ತದೆಯಂತೆ. ಆರ್ಥಿಕ ನಷ್ಟ, ಅಸಂತೋಷಕ್ಕೆ ಇದು ಕಾರಣವಾಗುತ್ತದೆ. ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡಬಾರದು, ವಾಸ್ತು ದೋಷವನ್ನು ತಡೆಯಬೇಕು ಎನ್ನುವವರು ಮನೆಯಲ್ಲಿ ಸದಾ ತಾಜಾ ಹೂ ಇಡಬೇಕು. ಹೂ ಒಣಗಿದ ತಕ್ಷಣ ಅದನ್ನು ಹೊರಗೆ ಹಾಕಬೇಕು.
ಒಣಗಿದ ಹೂ ಮನೆಯಲ್ಲಿದ್ದರೆ ತಾಯಿ ಲಕ್ಷ್ಮಿ ಮನೆ ಪ್ರವೇಶ ಮಾಡುವುದಿಲ್ಲವಂತೆ. ಮನೆಯಲ್ಲಿದ್ದ ಲಕ್ಷ್ಮಿ ಕೂಡ ಒಣಗಿದ ಹೂ ನೋಡಿ ಮನೆ ಬಿಡುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ದೇವರ ಮನೆಯಲ್ಲಿ ಕೂಡ ಒಣಗಿದ ಹೂವನ್ನು ಅಪ್ಪಿತಪ್ಪಿಯೂ ಇಡಬಾರದು. ಹೂ ಒಣಗುವ ಮುನ್ನವೇ ಹೂವನ್ನು ಕಸಕ್ಕೆ ಹಾಕಿ ಹೊಸ ಹೂವನ್ನು ದೇವರಿಗೆ ಮುಡಿಸಬೇಕು.