ಬಾಳೆ ಗಿಡದ ಎಲ್ಲಾ ಭಾಗಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಬರುವಂತದ್ದೇ. ಬಾಳೆಹಣ್ಣಿನಂತೆ ಬಾಳೆಹೂವು ಕೂಡಾ ಬಹೂಪಯೋಗಿ. ಇದರಲ್ಲಿ ಹೇರಳವಾದ ಕ್ಯಾಲ್ಸಿಯಂ ಅಂಶಗಳಿದ್ದು, ನಿಮ್ಮ ಮನೆಯಲ್ಲಿ ಬಾಳೆ ಗಿಡವಿದ್ದರೆ ಅದರಲ್ಲಿ ಬಾಳೆಕಾಯಿ ಬಲಿಯುತ್ತಿದ್ದಂತೆ ಅದರ ಹೂವನ್ನು ಕೊಯ್ದು ಚಟ್ನಿ ಇಲ್ಲವೇ ಪಲ್ಯ ರೂಪದಲ್ಲಿ ಸೇವಿಸಿ.
ಇದರಲ್ಲಿ ನ್ಯೂಟ್ರಿಷನ್ ಪ್ರಮಾಣ ಸಾಕಷ್ಟಿದ್ದು ಇದರ ಸೇವನೆಯಿಂದ ದೇಹಕ್ಕೆ ಫೈಬರ್, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಇ ಸಿಗುತ್ತದೆ. ರಕ್ತಹೀನತೆ ಸಮಸ್ಯೆ ಇರುವವರಿಗೆ ಇದರ ಸೇವನೆಯಿಂದ ಹಲವು ರೀತಿಯ ಪ್ರಯೋಜನಗಳು ಸಿಗುತ್ತವೆ. ನಿಮ್ಮ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.
ಮೆದುಳಿನ ಚಟುವಟಿಕೆಗಳನ್ನು ಚುರುಕುಗೊಳಿಸುವ ಇದು ನಿಮ್ಮ ಸುಸ್ತು, ಆಯಾಸವನ್ನು ದೂರ ಮಾಡುತ್ತದೆ. ಋತುಚಕ್ರ ಸಮಸ್ಯೆ ಇರುವವರು ಇದನ್ನು ಸೇವಿಸುವುದರಿಂದ ಹೊಟ್ಟೆ ಬೆನ್ನು ನೋವು ಕಡಿಮೆಯಾಗುತ್ತದೆ.
ಬಾಣಂತಿಯರಿಗೆ ಇದರ ಚಟ್ನಿ ಅಥವಾ ಪಲ್ಯ ತಯಾರಿಸಿ ಬೆಳ್ಳುಳ್ಳಿ ಒಗ್ಗರಣೆ ಹಾಕಿ ತಿನ್ನಲು ಕೊಡುತ್ತಾರೆ. ಇದರಲ್ಲಿರುವ ನಾರಿನಂಶ ಹಾಗೂ ಕ್ಯಾಲ್ಸಿಯಂ ಪ್ರಮಾಣ ಬಾಣಂತಿಯರಿಗೆ ಅತ್ಯಗತ್ಯವಾಗಿದ್ದು ಕಳೆದು ಹೋದ ಶಕ್ತಿಯನ್ನು ಇದು ಮರಳಿ ಕೊಡುತ್ತದೆ.