
ಪುರುಷ, ಮಹಿಳೆ ಎನ್ನದೆ ಎಲ್ಲರೂ ಈಗ ಕೂದಲಿನ ಸಮಸ್ಯೆಯಿಂದ ಬಳಲುತ್ತಾರೆ. ಕೆಲವರಿಗೆ ತಲೆಹೊಟ್ಟಿನ ಸಮಸ್ಯೆ ಕಾಡಿದ್ರೆ ಮತ್ತೆ ಕೆಲವರಿಗೆ ಕೂದಲು ಉದುರುವುದು, ಬೆಳ್ಳಗಾಗುವ ಸಮಸ್ಯೆ ಕಾಡುತ್ತದೆ. ಇದನ್ನು ದೂರ ಮಾಡಲು ಯಾವ ಶಾಂಪೂ ಹಾಕಿದ್ರೂ ಪ್ರಯೋಜನ ಶೂನ್ಯ.
ಮಾರುಕಟ್ಟೆಯಲ್ಲಿ ಬರುವ ಯಾವ ಹೇರ್ ಆಯಿಲ್ ಕೂಡ ನಿಮ್ಮ ಸಮಸ್ಯೆ ಬಗೆಹರಿಸುವುದಿಲ್ಲ. ಆದ್ರೆ ಹಾಲು ಹಾಗೂ ಕರಿಬೇವು ನಿಮ್ಮೆಲ್ಲ ಕೂದಲು ಸಮಸ್ಯೆಗೆ ಅತ್ಯುತ್ತಮ ಔಷಧಿ.
ತಲೆಹೊಟ್ಟಿನ ಸಮಸ್ಯೆಗೆ ನೀವು ಕರಿಬೇವು ಹಾಗೂ ಹಾಲನ್ನು ಬಳಸಬಹುದು. ಕರಿಬೇವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಸ್ವಲ್ಪ ಹಾಲನ್ನು ಹಾಕಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿ 3-4 ಗಂಟೆಯವರೆಗೆ ಹಾಗೆ ಬಿಡಿ. ನಂತ್ರ ತಣ್ಣನೆಯ ನೀರಿನಲ್ಲಿ ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತ ಬರುತ್ತದೆ.
ಕೂದಲು ಬಲಪಡೆಯಲು ಕರಿಬೇವು ನೆರವಾಗುತ್ತದೆ. ಕೂದಲು ಉದುರುವ ಸಮಸ್ಯೆಯಿರುವವರು ಕರಿಬೇವನ್ನು ರುಬ್ಬಿಕೊಂಡು ಅದಕ್ಕೆ ತಾಜಾ ಹಾಲು ಹಾಗೂ ತೆಂಗಿನೆಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. ಇದು ಕೂದಲಿಗೆ ಪ್ರೋಟೀನ್ ನೀಡಿ ಕೂದಲು ಬಲಗೊಳ್ಳಲು ನೆರವಾಗುತ್ತದೆ.
ಬಿಳಿ ಕೂದಲಿನ ಸಮಸ್ಯೆಯಿರುವವರು ಯಾವುದೇ ಅಡ್ಡಪರಿಣಾಮವಿಲ್ಲದ ಕರಿಬೇವು ಹಾಲಿನ ಮಿಶ್ರಣವನ್ನು ಹಚ್ಚಿಕೊಳ್ಳಬಹುದು. ಕರಿಬೇವನ್ನು ಹಾಲಿನಲ್ಲಿ ರುಬ್ಬಿಕೊಂಡು ತೆಂಗಿನ ಎಣ್ಣೆಯನ್ನು ಹಾಕಿ 5-6 ನಿಮಿಷ ಕುದಿಸಿ. ಮಿಶ್ರಣ ತಣ್ಣಗಾದ ಮೇಲೆ ತಲೆ ಕೂದಲಿಗೆ ಹಚ್ಚಿ ರಾತ್ರಿ ಪೂರ್ತಿ ಬಿಡಿ. ಬೆಳಿಗ್ಗೆ ಎದ್ದ ತಕ್ಷಣ ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.
ಒರಟು ಕೂದಲು ಈಗ ಎಲ್ಲರನ್ನು ಕಾಡುವ ಸಮಸ್ಯೆ. ನೀವು ಒಣ ಕೂದಲು ಹೊಂದಿದ್ದರೆ ಕರಿಬೇವಿನ ಎಲೆಗಳನ್ನು ರುಬ್ಬಿ ಅದಕ್ಕೆ ಹಾಲು, ಸ್ವಲ್ಪ ಜೇನುತುಪ್ಪ ಹಾಗೂ ಮೊಟ್ಟೆಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಕೂದಲು ನೈಸರ್ಗಿಕವಾಗಿ ಹೊಳಪು ಪಡೆಯುತ್ತದೆ.