ಈಗ ಬಹುತೇಕ ಎಲ್ಲರದ್ದೂ ಒತ್ತಡದ ಬದುಕು. ಹಾಗಾಗಿ ಸಂತೋಷವಾಗಿರೋದು ಬಹಳ ಪ್ರಯಾಸದ ಕೆಲಸವಾಗಿಬಿಟ್ಟಿದೆ. ಪ್ರತಿಯೊಬ್ಬರೂ ಸಂತೋಷವಾಗಿರುವುದು ಹೇಗೆ ಎಂಬುದನ್ನು ಕಲಿಯಲು ಬಯಸ್ತಾರೆ. ಆದ್ರೆ ಇದು ಆನ್‌ಲೈನ್ ಅಥವಾ ಇಂಟರ್ನೆಟ್‌ನಲ್ಲಿ ಸಿಗುವ ವಸ್ತುವಲ್ಲ. ಸಂತೋಷ ಎಂದರೆ ಉತ್ತಮ ಮನಸ್ಥಿತಿ ಮತ್ತು ಒಳ್ಳೆಯ ಭಾವನೆ. ನಾವು ಸಂತೋಷವಾಗಿರಲು ಹೊರಗಿನ ವಿಷಯಗಳನ್ನು ಅವಲಂಬಿಸಿರುತ್ತೇವೆ, ಆದರೆ ವಾಸ್ತವದಲ್ಲಿ ಸಂತೋಷವು ನಮ್ಮೊಳಗೇ ಇರುವ ಸಂಗತಿ.
ನಮ್ಮ ದೇಹದಲ್ಲಿನ ನಾಲ್ಕು ಹಾರ್ಮೋನುಗಳು – ಡೋಪಮೈನ್, ಆಕ್ಸಿಟೋಸಿನ್, ಸಿರೊಟೋನಿನ್ ಮತ್ತು ಎಂಡಾರ್ಫಿನ್ ಒಟ್ಟಿಗೆ ನಮ್ಮ ಮನಸ್ಥಿತಿ ಮತ್ತು ಸಂತೋಷವನ್ನು ಸಮತೋಲನಗೊಳಿಸುತ್ತವೆ.
ಸಿರೊಟೋನಿನ್ : ಈ ಹಾರ್ಮೋನ್ ನಮ್ಮ ಮನಸ್ಥಿತಿಯನ್ನು ಸ್ಥಿರಗೊಳಿಸುತ್ತದೆ, ನಿದ್ರೆ ಮತ್ತು ಜೀರ್ಣಕ್ರಿಯೆಯನ್ನು ಸಮತೋಲನಗೊಳಿಸುತ್ತದೆ. ಈ ಹಾರ್ಮೋನ್ ಸಕ್ರಿಯವಾಗಿರಲು ಪ್ರತಿದಿನ ಸ್ವಲ್ಪ ಹೊತ್ತು ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳಿ. ನಿಯಮಿತವಾಗಿ ಏರೋಬಿಕ್ ವ್ಯಾಯಾಮ ಮಾಡಿ. ಟ್ರಿಪ್ಟೊಫಾನ್‌ನಲ್ಲಿ ಸಮೃದ್ಧವಾಗಿರುವ ಆಹಾರಗಳಾದ ವಾಲ್‌ನಟ್ಸ್, ಚೀಸ್, ರೆಡ್ ಮೀಟ್, ಚಿಕನ್, ಮೀನು, ಓಟ್ಸ್, ಬೀನ್ಸ್, ಬೇಳೆಗಳು, ಮೊಟ್ಟೆ ಮತ್ತು ವಿಟಮಿನ್ ಭರಿತ ಹಣ್ಣು, ತರಕಾರಿಗಳು ಮತ್ತು ಧಾನ್ಯಗಳು.
ಧ್ಯಾನ ಮತ್ತು ಯೋಗ ಮಾಡಿ. ಈ ಹಾರ್ಮೋನ್ ಸಕ್ರಿಯವಾಗಿರಬೇಕೆಂದರೆ ವ್ಯಾಯಾಮ ಮತ್ತು ಆಹಾರ ಪದ್ಧತಿಯನ್ನು ಪಾಲಿಸಬೇಕು. ಒತ್ತಡ ಮತ್ತು ನಕಾರಾತ್ಮಕ ಚಿಂತನೆಯನ್ನು ಕಡಿಮೆ ಮಾಡಬೇಕು.
ಡೋಪಮೈನ್: ಇದು ಸಂತೋಷ ಮತ್ತು ತೃಪ್ತಿಯ ಭಾವನೆಗಳನ್ನು ಉಂಟುಮಾಡುವ ಮೆದುಳಿನ ಪ್ರದೇಶಗಳನ್ನು ಸಕ್ರಿಯಗೊಳಿಸುತ್ತದೆ. ಈ ಹಾರ್ಮೋನ್ ಸಕ್ರಿಯವಾಗಿರಬೇಕೆಂದರೆ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಿ. ಇದರಿಂದ ಏನಾದರೂ ದೊಡ್ಡ ಸಾಧನೆ ಮಾಡಬಹುದೆಂಬ ಆತ್ಮವಿಶ್ವಾಸ ಬರುತ್ತದೆ. ದಿನವೂ ವ್ಯಾಯಾಮ ಮಾಡುವುದರ ಜೊತೆಗೆ ಒಳ್ಳೆಯ ಆಹಾರ ಸೇವನೆ ಮತ್ತು ಸಾಕಷ್ಟು ನಿದ್ರೆ ಕೂಡ ಕಡ್ಡಾಯ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ, ಜಂಕ್ ಫುಡ್ ನಿಂದ ದೂರವಿರಿ. ಹೆಚ್ಚು ಹೊತ್ತು ವಿಶ್ರಮಿಸಬೇಡಿ, ಅತಿಯಾಗಿ ಕೆಲಸ ಮಾಡಬೇಡಿ.
ಎಂಡಾರ್ಫಿನ್ಸ್: ಈ ಹಾರ್ಮೋನ್ ನೋವನ್ನು ಕಡಿಮೆ ಮಾಡುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ಸಂತೋಷದ ಭಾವನೆಗಳನ್ನು ಹೆಚ್ಚಿಸುತ್ತದೆ. ಈ ಹಾರ್ಮೋನ್ ಸಕ್ರಿಯವಾಗಿರಲು ತ್ರಾಣವನ್ನು ಹೆಚ್ಚಿಸುವ ಕ್ರೀಡೆಗಳನ್ನು ಆಡಿ. ತುಂಬಾ ನಗು, ನೃತ್ಯ, ನಿಮಗೆ ಇಷ್ಟವಾದದ್ದನ್ನು ಮಾಡಿ. ಡಾರ್ಕ್ ಚಾಕೊಲೇಟ್ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಬಹುದು. ಆದರೆ ಸಮತೋಲಿತ ಪ್ರಮಾಣದಲ್ಲಿರಬೇಕು. ಸೃಜನಶೀಲರಾಗಿರಿ, ಬರವಣಿಗೆ ಮತ್ತು ಪೇಂಟಿಂಗ್ ಕೂಡ ಮಾಡಬಹುದು. ಒಳ್ಳೆಯ ವ್ಯಕ್ತಿಗಳಿಂದ ದೂರ ಉಳಿಯಬೇಡಿ, ಯಾವುದೇ ಹವ್ಯಾಸಗಳಿಲ್ಲ ಎಂದು ಗೇಲಿ ಮಾಡಬೇಡಿ. ಸಮತೋಲನವನ್ನು ರಚಿಸುವುದು ಮುಖ್ಯ.
ಆಕ್ಸಿಟೋಸಿನ್: ಈ ಹಾರ್ಮೋನ್ ಉತ್ತಮ ಸಾಮಾಜಿಕ ನಡವಳಿಕೆಯನ್ನು ಹೆಚ್ಚಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಸಕ್ರಿಯವಾಗಿರಬೇಕೆಂದರೆ ಆಪ್ತ ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಿ. ಅವರೊಂದಿಗೆ ಸಮಯ ಕಳೆಯಿರಿ ಮತ್ತು ಉತ್ತಮ ಸಂಭಾಷಣೆಗಳನ್ನು ಮಾಡಿ. ಆತ್ಮೀಯರನ್ನು ತಬ್ಬಿಕೊಳ್ಳಬಹುದು, ಬೆನ್ನುತಟ್ಟಿ ಪ್ರೋತ್ಸಾಹಿಸಬಹುದು. ದಯೆ, ಸಹಾನುಭೂತಿ ಇರಲಿ. ಸಾಕುಪ್ರಾಣಿಗಳನ್ನು ಇಟ್ಟುಕೊಳ್ಳಿ. ಸಾಮಾಜಿಕ ಚಟುವಟಿಕೆಗಳು ಮತ್ತು ಜನರಿಂದ ದೂರವಿರಬೇಡಿ. ಒಂಟಿಯಾಗಿ ಜೀವನ ನಡೆಸಬೇಡಿ.