ಪಶ್ಚಿಮ ಬಂಗಾಳದ ಸಿಲಿಗುರಿಯ ಹಲವಾರು ಮದುವೆ ಮನೆಗಳಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದವು. ಪೊಲೀಸರಿಗೆ ದೂರುಗಳು ಕೂಡ ದಾಖಲಾಗಿದ್ದವು. ಒಂದಾದ ಮೇಲೊಂದು ದೂರುಗಳು ಬರುತ್ತಿದ್ದಂತೆ ಪೊಲೀಸರು ಕೂಡ ಕಳ್ಳನನ್ನು ಹಿಡಿಯಲು ಹೊಂಚು ಹಾಕುತ್ತಿದ್ದರು. ಕೊನೆಗೂ ಕಳ್ಳ ಸಿಕ್ಕಿಬಿದ್ದಿದ್ದಾನೆ. ಅದು ಕೂಡ ಅತಿಥಿಗಳ ಸೋಗಿನಲ್ಲಿ ಬರುತ್ತಿದ್ದ ಈತ ಕಳ್ಳತನ ಮಾಡುತ್ತಿದ್ದ.
ಕಳ್ಳತನದ ಈ ವಿಶಿಷ್ಟ ವಿಧಾನದಿಂದ ತನಿಖಾಧಿಕಾರಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. ಮದುವೆ ಸೇರಿದಂತೆ ಅನೇಕ ಸಮಾರಂಭಗಳಲ್ಲಿ ಜನಸಂದಣಿಯ ನಡುವೆ ಕಳ್ಳತನ ಮಾಡುತ್ತಿದ್ದ. ಸಿಕ್ಕಿಬಿದ್ದರೆ ಥಳಿತಕ್ಕೊಳಗಾಗುವ ಸಾಧ್ಯತೆ ಇದ್ದರೂ ಈತ ಮಾತ್ರ ತನ್ನ ಕೃತ್ಯಗಳನ್ನು ಮುಂದುವರೆಸುತ್ತಿದ್ದ. ಬಂಧಿತ ವ್ಯಕ್ತಿಯ ಹೆಸರು ಮನೋಜ್ ಚೌಧರಿ. ಈತ ವೃತ್ತಿಯಲ್ಲಿ ಬಣ್ಣದ ಕೆಲಸಗಾರ. ಸೋಮವಾರ ಈತನನ್ನು ಸಿಲಿಗುರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಚಳಿಗಾಲದಲ್ಲಿ ಸಿಲಿಗುರಿ ನಗರದಲ್ಲಿ ಅನೇಕ ಮದುವೆ ಸಮಾರಂಭಗಳು ನಡೆದಿದ್ದವು. ಈ ಋತುವಿನ ಆ ಮದುವೆಗಳಲ್ಲಿ ಕಳ್ಳತನ ಪ್ರಕರಣಗಳು ಸಂಭವಿಸಿದ್ದವು. ಹಾಗಾದರೆ ಅತಿಥಿಗಳೇ ಕಳ್ಳತನ ಮಾಡುತ್ತಿದ್ದಾರಾ ? ಅಥವಾ ಅತಿಥಿಗಳ ಸೋಗಿನಲ್ಲಿ ಬೇರೆ ಯಾರೋ ಬರುತ್ತಿದ್ದಾರಾ ? ಎಂದು ಸಿಲಿಗುರಿ ಠಾಣಾ ಪೊಲೀಸರು ಕೂಡ ಸಂದೇಹದಲ್ಲಿದ್ದರು.
ಆ ಎಲ್ಲಾ ಸಮಾರಂಭಗಳ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದು, ಜನವರಿಯಲ್ಲಿ ಪ್ರಧಾನನಗರದ ಮದುವೆ ಮನೆಯಲ್ಲಿ ಇದೇ ರೀತಿ ಕಳ್ಳತನ ನಡೆದಿತ್ತು. ಆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆಹ್ವಾನವಿಲ್ಲದ ವ್ಯಕ್ತಿಯನ್ನು ಗುರುತಿಸಲಾಯಿತು. ಆ ಫೋಟೋವನ್ನು ಸಾಮಾಜಿಕ ಮಾಧ್ಯಮ, ವಿವಿಧ ಕಟ್ಟಡಗಳು ಮತ್ತು ಸಮಾರಂಭಗಳಲ್ಲಿ ಪೊಲೀಸರು ಹರಡಿದರು.
ಭಾನುವಾರ ರಾತ್ರಿ ಸಿಲಿಗುರಿಯ ಸೇವಕ್ ರಸ್ತೆಯ ಸಮಾರಂಭವೊಂದರಲ್ಲಿ ಮದುವೆ ನಡೆಯುತ್ತಿತ್ತು. ಅಲ್ಲಿ ಸೂಟ್-ಬೂಟ್ ಧರಿಸಿಕೊಂಡು ಮನೋಜ್ ಚೌಧರಿ ಆಗಮಿಸಿದ್ದ. ನಿವೃತ್ತ ಸೇನಾ ಅಧಿಕಾರಿಯೊಬ್ಬರು ಆತನನ್ನು ಗುರುತಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪಾಣಿಟ್ಯಾಂಕಿ ಠಾಣೆಯ ಪೊಲೀಸರು ಕೂಡಲೇ ಸಮಾರಂಭ ಸ್ಥಳಕ್ಕೆ ತಲುಪಿ ಆ ವ್ಯಕ್ತಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ಯಲಾಯಿತು. ಬಂಧಿತ ವ್ಯಕ್ತಿಯ ಮನೆ ಸಿಲಿಗುರಿ ಸಮೀಪದ ಶಿವಮಂದಿರ ಪ್ರದೇಶದಲ್ಲಿದೆ. ಕಳ್ಳತನದ ವಸ್ತುಗಳನ್ನು ಎಲ್ಲಿ ಇಡಲಾಗಿದೆ ? ಎಷ್ಟು ದಿನಗಳಿಂದ ಈ ಕಳ್ಳತನ ಮಾಡುತ್ತಿದ್ದಾನೆ ? ಎಂಬ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.