
ಮೈಸೂರು: ಪರಿಚಯಸ್ಥರ ಮನೆಗೆ ಕನ್ನ ಹಾಕಿದ್ದ ಮೂವರು ಮಹಿಳೆಯರನ್ನು ಮೈಸೂರಿನ ಕುವೆಂಪು ನಗರ ಠಾಣೆ ಪೋಲಿಸರು ಬಂಧಿಸಿದ್ದಾರೆ.
ಅಮೃತಾ(38), ಅಶ್ವಿನಿ(28), ಶ್ರುತಿ(26) ಬಂಧಿತರು ಎಂದು ಹೇಳಲಾಗಿದೆ. ಬಂಧಿತರಿಂದ 7.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 12 ಸಾವಿರ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಸ್ಕೂಟರ್, ಮತ್ತು ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಪೂರ್ಣಿಮಾ ಎಂಬುವರ ಮನೆಯಲ್ಲಿ ಇವರು ಕಳ್ಳತನ ಮಾಡಿದ್ದರು. ಮೈಸೂರಿನ ಕುವೆಂಪು ನಗರದ ಎ ಬ್ಲಾಕ್ ನಿವಾಸಿಯಾಗಿರುವ ಪೂರ್ಣಿಮಾ ಮಗಳ ಮದುವೆಗಾಗಿ 150 ಗ್ರಾಂ ಚಿನ್ನಾಭರಣ ಖರೀದಿಸಿದ್ದರು. ಈ ಮೂವರು ಮಹಿಳೆಯರು ಸೇರಿ ಚಿನ್ನಾಭರಣ ಹಾಗೂ 20,000 ರೂ. ಕಳವು ಮಾಡಿದ್ದರು ಎನ್ನಲಾಗಿದೆ.
ಆರೋಪಿ ಅಮೃತಾ ಬಳಿ ಪೂರ್ಣಿಮಾ ಡ್ರೈವಿಂಗ್ ಕಲಿಯುತ್ತಿದ್ದರು. ಆಗಾಗ ಪೂರ್ಣಿಮಾ ಮನೆಗೆ ಆರೋಪಿ ಅಮೃತಾ ಬಂದು ಹೋಗುತ್ತಿದ್ದರು. ಈ ವೇಳೆ ಮನೆಯಲ್ಲಿ ಚಿನ್ನಾಭರಣ ನಗದು ಇರುವ ಬಗ್ಗೆ ಮಾಹಿತಿ ಗೊತ್ತಾಗಿದೆ. ಡಿಸೆಂಬರ್ 31 ರಂದು ನಕಲಿ ಕೀ ಬಳಸಿ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಕುವೆಂಪು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.