
ಬೆಂಗಳೂರು: ತಲಘಟ್ಟಪುರದಲ್ಲಿ ರಾಬರಿಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದು, ಕಳವು ಮಾಡಲು ಮನೆಗೆ ನುಗ್ಗಿದ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ತಲಘಟ್ಟಪುರ ವಿಶ್ರಾಂತಿ ಲೇಔಟ್ ನಲ್ಲಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ನಿನ್ನೆ ಮುಂಜಾನೆ 4:30 ರಿಂದ 5 ಗಂಟೆ ಸುಮಾರಿಗೆ ಕಳ್ಳತನ ಮಾಡಲು ಯತ್ನಿಸಿದ್ದರು. ಟೆರೇಸ್ ಬಾಗಿಲು ಓಪನ್ ಮಾಡಿ ಕಳ್ಳರು ಮನೆಗೆ ನುಗ್ಗಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ನೋಡಿದ್ದ ಮನೆ ಮಾಲೀಕ ಮನೆಯಲ್ಲಿ ಕಳವಿಗೆ ರೂಂ ಪ್ರವೇಶಿಸಿದ ಕಳ್ಳರನ್ನು ಲಾಕ್ ಮಾಡಿದ್ದರು.
ಡೋರ್ ಕ್ಲೋಸ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಕಲೀಂ ಎಲೆಕ್ಟ್ರಾನಿಕ್ ಸಿಟಿ ಮೂಲದವನು. ಉಳಿದ ಆರೋಪಿಗಳು ಉತ್ತರ ಭಾರತ ಮೂಲದವರಾಗಿದ್ದು, ಆರೋಪಿಗಳು ಹೋಟೆಲ್, ಬಾರ್ ಗಳಲ್ಲಿ ಕೆಲಸ ಮಾಡುತ್ತಿದ್ದರು.
ಬಂಧಿತರಿಂದ ಲಾಂಗ್, ಮಚ್ಚು ರಾರ್, ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ. ಮನೆ ಮಾಲೀಕರು ಶ್ರೀಮಂತರು ಎಂಬ ವಿಷಯ ತಿಳಿದು ಕಳ್ಳತನಕ್ಕೆ ಯತ್ನಿಸಿದ್ದರು. ಎರಡು ತಿಂಗಳಿನಿಂದ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಎಂದು ಡಿಸಿಪಿ ಕೃಷ್ಣಕಾಂತ್ ಹೇಳಿದ್ದಾರೆ.