ವಿಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ. ಆದರೆ ಕಾಲಕ್ಕೆ ತಕ್ಕಂತೆ ಹೊಸ ಹೊಸ ರೋಗಗಳು, ಸಮಸ್ಯೆಗಳು ಕೂಡ ಹೆಚ್ಚುತ್ತಿವೆ. ಇಂತಹ ವಿಚಿತ್ರ ಕಾಯಿಲೆಯೊಂದು ಈಗ ಬೆಳಕಿಗೆ ಬಂದಿದೆ. ಯುವತಿಯೊಬ್ಬಳ ವಿಚಿತ್ರ ಮಾನಸಿಕ ಸ್ಥಿತಿ ಇದು. ಚೀನಾದ ಈ ಯುವತಿಗೆ ಲವ್ ಬ್ರೈನ್ ಎಂಬ ಅಸ್ವಸ್ಥತೆ ಇದೆ.
ಲವ್ ಬ್ರೈನ್ ಎಂದರೇನು?
ಲವ್ ಮೆದುಳು ಒಂದು ರೀತಿಯ ಆಂತರಿಕ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಅಸ್ವಸ್ಥತೆಯಾಗಿದ್ದು. ಇದರಲ್ಲಿ ಒಬ್ಬ ವ್ಯಕ್ತಿಯು ತನ್ನ ಸಂಗಾತಿಯ ಮೇಲೆ ಹೆಚ್ಚು ಅವಲಂಬಿತನಾಗುತ್ತಾನೆ. ಬಾಧಿತ ವ್ಯಕ್ತಿಯ ಬಾಲ್ಯ ಉತ್ತಮವಾಗಿಲ್ಲದೇ ಇದ್ದರೆ ಇದು ಹೆಚ್ಚಾಗಿ ಸಂಭವಿಸುತ್ತದೆ. ಬಾಲ್ಯದಲ್ಲಿ ಪೋಷಕರ ನಡವಳಿಕೆ ಕೂಡ ಸೂಕ್ತವಾಗಿಲ್ಲದಿದ್ದರೆ ಮಗುವಿಗೆ ಈ ಸಮಸ್ಯೆ ಬರಬಹುದು. ತನ್ನ ಆತ್ಮೀಯರ ಮೇಲೆ ವ್ಯಕ್ತಿ ಸಂಪೂರ್ಣವಾಗಿ ಅವಲಂಬಿತನಾಗುವ ಸ್ಥಿತಿ ಇದು. ಆದರೆ ಇನ್ನೊಬ್ಬ ವ್ಯಕ್ತಿಗೆ ಇದು ಇಷ್ಟವಾಗದೇ ಇರಬಹುದು.
18 ವರ್ಷದ ಚೀನಾದ ಹುಡುಗಿ ತನ್ನ ಗೆಳೆಯನ ಮೇಲೆ ಅದೇ ರೀತಿ ಡಿಪೆಂಡ್ ಆಗಿದ್ದಾಳೆ. ವಿಶ್ವವಿದ್ಯಾನಿಲಯದ ಮೊದಲ ವರ್ಷದಲ್ಲಿ ಹುಡುಗಿಯ ಪ್ರೇಮ ಸಂಬಂಧ ಪ್ರಾರಂಭವಾಯಿತು. ಅವಳು ತನ್ನ ಪ್ರಿಯಕರನ ಮೇಲೆ ತುಂಬಾ ಅವಲಂಬಿತಳಾಗಿದ್ದಳು. ನಿರಂತರವಾಗಿ ಆತನ ಬಗ್ಗೆ ಅಪ್‌ಡೇಟ್ ಕೇಳುತ್ತಿದ್ದಳು. ಈ ನಡವಳಿಕೆಯು ಸಂಬಂಧದಲ್ಲಿ ಸಾಕಷ್ಟು ಉದ್ವಿಗ್ನತೆಯನ್ನು ಉಂಟು ಮಾಡಿತು, ಇದರಿಂದಾಗಿ ಪ್ರೇಮಿ ಅವಳನ್ನು ಬಿಡಲು ನಿರ್ಧರಿಸಿದನು.
ಬ್ರೇಕಪ್ ಬಳಿಕವೂ ಯುವತಿ ಆ ಹುಡುಗನ ಬೆನ್ನು ಬಿಡಲಿಲ್ಲ. ಆತನಿಗೆ ದಿನಕ್ಕೆ 100 ಕ್ಕೂ ಹೆಚ್ಚು ಬಾರಿ ಕರೆ ಮಾಡಲು ಪ್ರಾರಂಭಿಸಿದಳು. ನೊಂದ ಹುಡುಗ ಫೋನ್ ರಿಸೀವ್ ಮಾಡಿಲ್ಲ, ತನ್ನ ಸುರಕ್ಷತೆಗಾಗಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಪೊಲೀಸರು ಯುವತಿಯ ಮನೆಗೆ ತಲುಪಿದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಹೇಗೋ ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆಕೆ ಲವ್ ಬ್ರೈನ್ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಇದು ಆತಂಕ, ಖಿನ್ನತೆ, ಬೈ-ಪೋಲಾರ್ ಡಿಸಾರ್ಡರ್‌ನಂತಹ ಅನೇಕ ಇತರ ಲಕ್ಷಣಗಳನ್ನು ಹೊಂದಿದೆ. ಸಂತ್ರಸ್ತರಿಗೆ ಚಿಕಿತ್ಸೆಯ ಅವಶ್ಯಕತೆಯಿದೆ. ಇದು ಮಾನಸಿಕ ಅಸ್ವಸ್ಥತೆಯಾಗಿದ್ದು, ಯಾರೂ ಈ ಬಗ್ಗೆ ಹೆಚ್ಚು ಮುಕ್ತವಾಗಿ ಮಾತನಾಡುವುದಿಲ್ಲ.