
ವಿಶ್ವದ ಅತ್ಯಂತ ಚಿಕ್ಕ ದೇಶದ ವಿಶೇಷತೆ ನಿಜಕ್ಕೂ ದಂಗುಬಡಿಸುವಂತಿದೆ. ವ್ಯಾಟಿಕನ್ ಸಿಟಿಯನ್ನು ವಿಶ್ವದ ಅತ್ಯಂತ ಚಿಕ್ಕ ದೇಶ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಪ್ರಪಂಚದಲ್ಲಿ ಇನ್ನೂ ಚಿಕ್ಕ ದೇಶವಿದೆ, ಅದು ಕೇವಲ ಎರಡು ಕಂಬಗಳ ಮೇಲೆ ನಿಂತಿದೆ. ಅದರ ಹೆಸರು ಸೀಲ್ಯಾಂಡ್.
ಸೀಲ್ಯಾಂಡ್ ಇಂಗ್ಲೆಂಡ್‌ನಿಂದ ಸುಮಾರು 10 ರಿಂದ 12 ಕಿಲೋಮೀಟರ್ ದೂರದಲ್ಲಿ ಸಮುದ್ರದ ಮಧ್ಯದಲ್ಲಿದೆ. ಈ ದೇಶದಲ್ಲಿ ವಾಸಿಸುವ ಜನರ ಸಂಖ್ಯೆ ಸುಮಾರು 25 ರಿಂದ 30ರಷ್ಟಿದೆ. ಈ ದೇಶದ ಗಾತ್ರ ಫುಟ್ಬಾಲ್ ಮೈದಾನಕ್ಕಿಂತಲೂ ಕಡಿಮೆ. ಆದರೆ ಸೀಲ್ಯಾಂಡ್ ದೇಶವು ತನ್ನದೇ ಆದ ಫುಟ್ಬಾಲ್ ತಂಡವನ್ನು ಹೊಂದಿದೆ. ಇದಲ್ಲದೆ ತನ್ನದೇ ಆದ ಸಂವಿಧಾನ ಮತ್ತು ಧ್ವಜವನ್ನು ಸಹ ಹೊಂದಿದೆ. ವಿಶೇಷ ಅಂದ್ರೆ ಪ್ರಪಂಚದ ಅನೇಕ ದೇಶಗಳು ಈ ಪುಟ್ಟ ರಾಷ್ಟ್ರವನ್ನು ಗುರುತಿಸಿವೆ.
ಸೀಲ್ಯಾಂಡ್ ಅನ್ನು ಒಮ್ಮೆ 2ನೇ ವಿಶ್ವ ಯುದ್ಧದ ಸಮಯದಲ್ಲಿ ಬ್ರಿಟಿಷ್ ರಾಯಲ್ ನೇವಿ ಬಳಸಿಕೊಂಡಿತ್ತು. ಬ್ರಿಟಿಷರು ಜರ್ಮನ್ ದಾಳಿಯನ್ನು ಎದುರಿಸಲು ಸೀಲ್ಯಾಂಡ್ ಅನ್ನು ಬಳಸಿಕೊಂಡರು. ಆದರೆ 1967 ರಲ್ಲಿ ಪ್ಯಾಡಿ ರಾಯ್ ಬೇಟ್ಸ್ ಎಂಬ ಬ್ರಿಟಿಷ್ ವ್ಯಕ್ತಿ ಈ ಸ್ಥಳವನ್ನು ಸ್ವಾಧೀನಪಡಿಸಿಕೊಂಡಿದ್ದ. ತನ್ನ ರೇಡಿಯೊ ಸ್ಟೇಷನ್ ಅನ್ನು ಇಲ್ಲಿ ಅಕ್ರಮವಾಗಿ ಪ್ರಾರಂಭಿಸಿದ.
ಇದರ ಹೊರತಾಗಿಯೂ ಈ ಸ್ಥಳವನ್ನು ಸಾರ್ವಭೌಮ ರಾಜ್ಯವೆಂದು ಪ್ರತಿಪಾದಿಸಲಾಯ್ತು. ಇಲ್ಲಿ ರಾಜಪ್ರಭುತ್ವದ ರೀತಿಯಲ್ಲಿ ಆಡಳಿತ ನಡೆಸಲಾಗುತ್ತಿದೆ. ಪ್ರಸ್ತುತ ಈ ದೇಶದ ರಾಜಕುಮಾರ ಮೈಕೆಲ್ ಬೇಟ್ಸ್. ಕಳೆದ ಸುಮಾರು 50 ವರ್ಷಗಳಿಂದ ಅವರ ಕುಟುಂಬವು ಈ “ಮೈಕ್ರೋನೇಷನ್” ಅನ್ನು ಆಳುತ್ತಿದೆ. ಪ್ರಪಂಚದ ಅನೇಕ ದೇಶಗಳು ಇದನ್ನು ಅಧಿಕೃತವಾಗಿ ಗುರುತಿಸದಿದ್ದರೂ ಸೀಲ್ಯಾಂಡ್ ಸಾಕಷ್ಟು ವಿಸ್ತಾರವಾದ ಇತಿಹಾಸವನ್ನು ಹೊಂದಿದೆ. ಒತ್ತೆಯಾಳು ಪ್ರಕರಣಗಳು, ಪ್ರಾದೇಶಿಕ ವಿವಾದಗಳು ಮತ್ತು ಹೆಲಿಕಾಪ್ಟರ್ ಯುದ್ಧಗಳಂತಹ ಸನ್ನಿವೇಶಗಳನ್ನು ಎದುರಿಸಿದೆ. ಸಮುದ್ರದ ಮಧ್ಯದಲ್ಲಿ ಎರಡು ಕಂಬಗಳ ಮೇಲೆ ಈ ದೇಶ ಸ್ಥಾಪಿತವಾಗಿದೆ.