ನದಿ ಮತ್ತು ಸಮುದ್ರಗಳಲ್ಲಿ ದೋಣಿ ವಿಹಾರ ಸಾಮಾನ್ಯ. ಅನೇಕರು ಹಡಗಿನಲ್ಲಿ ಕೂಡ ಪ್ರಯಾಣಿಸಿದ ಅನುಭವ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಮುದ್ರಗಳಲ್ಲಿ ಕ್ರೂಸ್‌ಗಳನ್ನು ನಿರ್ಮಾಣ ಮಾಡಲಾಗ್ತಿದೆ. ಆದ್ರೀಗ ನೀರಿನ ಮೇಲೆ ತೇಲುವ ನಗರವೊಂದು ನಿರ್ಮಾಣವಾಗ್ತಿದೆ. ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಓಷಿಯಾನಿಕ್ಸ್ ಎಂಬ ತೇಲುವ ನಗರವನ್ನು ನಿರ್ಮಿಸಲಾಗುತ್ತಿದೆ. ಇದು ವಿಶ್ವದ ಮೊದಲ ತೇಲುವ ನಗರವಾಗಲಿದೆ. ಈ ವರ್ಷದ ಅಂತ್ಯದ ವೇಳೆಗೆ ಇದರ ನಿರ್ಮಾಣ ಆರಂಭವಾಗಲಿದ್ದು, 2028ಕ್ಕೆ ಸಿದ್ಧವಾಗಲಿದೆ.
12 ಸಾವಿರ ಜನರು ಉಳಿಯಲು ಅವಕಾಶ
ಓಷಿಯಾನಿಕ್ಸ್ ನಗರ ನಿರ್ಮಾಣಕ್ಕೆ ಹಸಿರು ಕಾಂಕ್ರೀಟ್ ಬಾಕ್ಸ್‌ನಲ್ಲಿ ನಿರ್ಮಿಸುತ್ತಿರುವ ವೇದಿಕೆಯನ್ನು ಸಮುದ್ರಕ್ಕೆ ತಂದು ಸಂಪರ್ಕಿಸಲಾಗುತ್ತದೆ. 6.3 ಹೆಕ್ಟೇರ್‌ನಲ್ಲಿ ಹರಡಿರುವ ಈ ಸಾಗರ ಸ್ಮಾರ್ಟ್ ಸಿಟಿಯಲ್ಲಿ 12 ಸಾವಿರ ಜನರು ವಾಸಿಸಲು ಸಾಧ್ಯವಿದೆ. ಆದಾಗ್ಯೂ ನಂತರ 1 ಲಕ್ಷ ಜನರಿಗೆ ಅವಕಾಶ ಕಲ್ಪಿಸಲು ಅದನ್ನು ನವೀಕರಿಸಬಹುದು.
ಆಟವಾಡಲು ಪ್ರತ್ಯೇಕ ಸ್ಥಳ
ಓಷಿಯಾನಿಕ್ಸ್ ಸಿಟಿಯ ವಿನ್ಯಾಸ ಅದ್ಭುತವಾಗಿದೆ.ವಾಸಕ್ಕೆ, ಆಟವಾಡಲು, ಮನರಂಜನೆ ಮತ್ತು ಶಾಪಿಂಗ್ ಮಾಡಲು ಪ್ರತ್ಯೇಕ ಸ್ಥಳಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಸೌರಶಕ್ತಿಯಿಂದ ವಿದ್ಯುತ್
ಈ ನಗರದಲ್ಲಿನ ಕಟ್ಟಡಗಳ ಛಾವಣಿಯ ಮೇಲೆ ಸೌರಶಕ್ತಿ ಫಲಕಗಳನ್ನು ಅಳವಡಿಸಲಾಗುತ್ತದೆ. ಈ ಮೂಲಕ ಅಗತ್ಯ ವಿದ್ಯುತ್ ಉತ್ಪಾದನೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ನಗರಕ್ಕೆ ಬೇಕಾದ ಸಂಪೂರ್ಣ ವಿದ್ಯುತ್ ಸೌರ ಶಕ್ತಿಯಿಂದಲೇ ಬರಲಿದೆ.
ಚಂಡಮಾರುತದಲ್ಲೂ ಸುರಕ್ಷಿತ
ಗಂಟೆಗೆ 250 ಕಿಲೋಮೀಟರ್ ವೇಗದ ಚಂಡಮಾರುತವನ್ನು ತಡೆದುಕೊಳ್ಳುವ ರೀತಿಯಲ್ಲಿ ಕಟ್ಟಡಗಳನ್ನು ಇಲ್ಲಿ ವಿನ್ಯಾಸಗೊಳಿಸಲಾಗುವುದು. ಕಟ್ಟಡಗಳು ಏಳು ಮಹಡಿಗಳಿಗಿಂತ ಕಡಿಮೆ ಎತ್ತರದಲ್ಲಿರುತ್ತವೆ, ಇದರಿಂದ ಅವು ಬಲವಾದ ಗಾಳಿಯನ್ನು ತಡೆದುಕೊಳ್ಳಬಲ್ಲವು.
ಬಲವಾದ ಅಲೆಗಳಲ್ಲಿಯೂ ಸುರಕ್ಷಿತ
ಅದರ ಷಡ್ಭುಜಾಕೃತಿಯ ಆಕಾರ ಮತ್ತು ಹಸಿರು ಕಾಂಕ್ರೀಟ್ ಕಾರಣ, ಈ ವೇದಿಕೆಯು ತುಂಬಾ ಪ್ರಬಲವಾಗಿದೆ, ಇದು ಬಲವಾದ ಅಲೆಗಳಲ್ಲಿಯೂ ಸುರಕ್ಷಿತವಾಗಿ ಉಳಿಯುತ್ತದೆ. ಹಸಿರು ಕಾಂಕ್ರೀಟ್ ಅನ್ನು ತ್ಯಾಜ್ಯ ವಸ್ತುಗಳಿಂದ ತಯಾರಿಸಲಾಗುತ್ತದೆ ಮತ್ತು ಸಾಮಾನ್ಯ ಕಾಂಕ್ರೀಟ್ಗಿಂತ ಇದು ಹೆಚ್ಚು ಬಾಳಿಕೆ ಬರುತ್ತದೆ.
ಸಮುದ್ರಾಹಾರ ಸಂಗ್ರಹಣೆ
ನಗರಕ್ಕಾಗಿ ನಿರ್ಮಿಸಲಾದ ಪ್ಲಾಟ್‌ಫಾರ್ಮ್‌ಗಳ ಅಡಿಯಲ್ಲಿ ನೆಟ್‌ಗಳನ್ನು ಅಳವಡಿಸಲಾಗುವುದು, ಇದನ್ನು ಸಮುದ್ರಾಹಾರ ಸಂಗ್ರಹಿಸಲು ಬಳಸಲಾಗುತ್ತದೆ. ಒಟ್ಟಿನಲ್ಲಿ ಸುಂದರವಾದ ನೀರಿನಲ್ಲಿ ತೇಲುವ ನಗರವೊಂದು ತಲೆಯೆತ್ತಲಿದೆ.