ದಕ್ಷಿಣ ಕೊರಿಯಾದ ಕರಾವಳಿಯಲ್ಲಿ ನಿರ್ಮಾಣವಾಗಲಿರುವ ವಿಶ್ವದ ಮೊದಲ ತೇಲುವ ನಗರವು 2025 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ವಿಶ್ವಸಂಸ್ಥೆಯ ಬೆಂಬಲದೊಂದಿಗೆ ಸಮುದ್ರ ಮಟ್ಟದಲ್ಲಿನ ಹೆಚ್ಚಳದ ಸಮಸ್ಯೆಯನ್ನು ನಿಭಾಯಿಸಲು ನಗರವನ್ನು ಬುಸಾನ್ ಕರಾವಳಿಯಿಂದ ಮಾಡಲಾಗುತ್ತಿದೆ.
ಇದು ಹಲವಾರು ಮಾನವ ನಿರ್ಮಿತ ದ್ವೀಪಗಳನ್ನು ಒಳಗೊಂಡಿರುವ ಪ್ರವಾಹ ನಿರೋಧಕ ಮೂಲಸೌಕರ್ಯ ಆಗಿದೆ. ಇದು ಸಮುದ್ರದಲ್ಲಿ ತೇಲುವ ಮುಖಾಂತರ ಪ್ರವಾಹದ ಅಪಾಯವನ್ನು ತೊಡೆದುಹಾಕುವ ಗುರಿಯನ್ನು ಹೊಂದಿದೆ.
ಓಷನಿಕ್ಸ್ ಹಾಗೂ ಯುನ್ ಹ್ಯೂಮನ್ ಸೆಟ್ಲ್‌ಮೆಂಟ್ ಪ್ರೋಗ್ರಾಂನ ಜಂಟಿ ಪ್ರಯತ್ನವಾಗಿರುವ ಈ ನಗರವು ಸೌರ ಫಲಕಗಳಿಂದ ತನ್ನದೇ ಆದ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ ಆಹಾರ ಮತ್ತು ಶುದ್ಧ ನೀರನ್ನು ಕೂಡ ಉತ್ಪಾದಿಸುತ್ತದೆ. ಪ್ರವಾಸಿಗರು ಮತ್ತು ನಿವಾಸಿಗಳನ್ನು ವಿಶೇಷವಾಗಿ ತಯಾರಿಸಿದ ದೋಣಿಗಳಲ್ಲಿ ಕರೆದೊಯ್ಯಲಾಗುತ್ತದೆ.
ಸ್ಥಳೀಯ ವರದಿಗಳ ಪ್ರಕಾರ, ನಗರವು 75 ಹೆಕ್ಟೇರ್‌ಗಳ ವಿಸ್ತೀರ್ಣವನ್ನು ಹೊಂದಿದೆ. ಜೊತೆಗೆ 10,000 ನಿವಾಸಿಗಳಿಗೆ ಅವಕಾಶ ಕಲ್ಪಿಸುತ್ತದೆ. ಸಂರಕ್ಷಿತ ಕೇಂದ್ರದ ಬಂದರಿನ ಸುತ್ತಲೂ ಆರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇದರರ್ಥ ಪ್ರತಿ ಗ್ರಾಮವು 1,650 ನಿವಾಸಿಗಳನ್ನು ಹೊಂದಿರಬಹುದು ಎನ್ನಲಾಗಿದೆ.
ಪ್ರವಾಹ, ಸುನಾಮಿ ಮತ್ತು ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳಲು ನಗರವನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಅಷ್ಟೇ ಅಲ್ಲ. ನಗರವು ಕಾಲಾನಂತರದಲ್ಲಿ ಬೆಳೆಯುವ, ರೂಪಾಂತರಗೊಳ್ಳುವ ಮತ್ತು ಸಾವಯವವಾಗಿ ಹೊಂದಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುವುದು ಎಂದು ಹೇಳಲಾಗಿದೆ.
ಈ ಯೋಜನೆಗೆ ಸುಮಾರು 200 ಮಿಲಿಯನ್ ಡಾಲರ್ ವೆಚ್ಚವಾಗಲಿದ್ದು, ಇದರ ನಿರ್ಮಾಣವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ರಿಪಬ್ಲಿಕ್ ಆಫ್ ಕೊರಿಯಾದ ಬುಸಾನ್ ಮೆಟ್ರೋಪಾಲಿಟನ್ ಸಿಟಿ, ಯುಎನ್-ಹಾಬಿಟೇಟ್ ಮತ್ತು ನ್ಯೂಯಾರ್ಕ್ ವಿನ್ಯಾಸಕರು ಓಷನಿಕ್ಸ್ ಗೆ ಈಗಾಗಲೇ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಸ್ಥಳೀಯ ಪ್ರದೇಶದ ಅಗತ್ಯತೆಗಳನ್ನು ಪೂರೈಸಲು ಓಷನಿಕ್ಸ್, ಸ್ಥಳೀಯ ವಿನ್ಯಾಸಕಾರರೊಂದಿಗೆ ಸಹಕರಿಸುತ್ತದೆ. ಫ್ಲೋಟಿಂಗ್ ಸಿಟಿ ಪರಿಕಲ್ಪನೆಯ ಮೂಲಕ ಹವಾಮಾನ ಹೊಂದಾಣಿಕೆ ಮತ್ತು ಪ್ರಕೃತಿ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಎದುರು ನೋಡಲಾಗುತ್ತಿದೆ ಮತ್ತು ಮೂಲಮಾದರಿಯನ್ನು ನಿಯೋಜಿಸಲು ಬುಸಾನ್ ಸೂಕ್ತ ಆಯ್ಕೆಯಾಗಿದೆ ಎಂದು ಯುಎನ್-ಹ್ಯಾಬಿಟಾಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮೈಮುನಾ ಮೊಹಮ್ಮದ್ ಷರೀಫ್ ಹೇಳಿದ್ದಾರೆ.