
ಛತ್ತೀಸ್ಗಢದ ಸಾರಂಗರ್ ಜಿಲ್ಲೆಯಲ್ಲಿ ವಿಶಿಷ್ಟವಾದ ಗ್ರಾಮವೊಂದಿದೆ. ಚುಹಿಪಾಲಿ ಎಂಬ ಈ ಹಳ್ಳಿಯಲ್ಲಿ ಪ್ರತಿ ಮಹಿಳೆಯ ಕೈಯ್ಯಲ್ಲೂ ಒಂದು ದೊಣ್ಣೆ ಇರುತ್ತದೆ. ಎಲ್ಲಿಗೆ ಹೋಗುವುದಾದರೂ ಈ ಗ್ರಾಮದ ಮಹಿಳೆಯರು ಕೈಯ್ಯಲ್ಲಿ ಕೋಲು ಹಿಡಿದುಕೊಂಡೇ ಹೊರಡುತ್ತಾರೆ.
ಡ್ರಗ್ಸ್, ಜೂಜು, ಬೆಟ್ಟಿಂಗ್ ಹೀಗೆ ಬೇಡದ ಚಟ ಅಂಟಿಸಿಕೊಂಡಿರುವವರಿಗೆ ಈ ಗ್ರಾಮದ ಮಹಿಳೆಯರೇ ಬುದ್ಧಿ ಕಲಿಸುತ್ತಿದ್ದಾರೆ. ಪ್ರತಿದಿನ ಸಂಜೆ ಗ್ರಾಮದ ಬೀದಿಗಳಲ್ಲಿ ಕುಡಿದು ತಿರುಗಾಡುವವರು, ಜೂಜು ಅಡ್ಡೆಗಳಲ್ಲಿ ಕೂರುವವರಿಗೆ ದಂಡಂ ದಶಗುಣಂ ಎಂದುಕೊಂಡೇ ಮಹಿಳೆಯರು ಶಿಕ್ಷೆ ವಿಧಿಸ್ತಿದ್ದಾರೆ.
ಹಳ್ಳಿಯಲ್ಲಿ ಚಿಕ್ಕ ಮಕ್ಕಳು, ಯುವಕರು ಕೂಡ ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಇದರಿಂದಾಗಿ ಅವರ ಭವಿಷ್ಯ ಅಂಧಕಾರದಲ್ಲಿದೆ. ಇದನ್ನು ತಡೆಯಲು ಚುಹಿಪಲಿ ಗ್ರಾಮದ ಮಹಿಳೆಯರು ಒಂದು ತಂಡವನ್ನು ರಚಿಸಿಕೊಂಡಿದ್ದಾರೆ. ಗ್ರಾಮ ಮತ್ತು ಅವರ ಪಂಚಾಯಿತಿಯಲ್ಲಿ ವ್ಯಸನಮುಕ್ತ ಅಭಿಯಾನವನ್ನು ನಡೆಸುತ್ತಿದ್ದಾರೆ. ಈ ತಂಡಕ್ಕೆ ಜೇವರದಾಯಿ ಮಹಿಳಾ ಸುರಕ್ಷಾ ಸಮಿತಿ ಎಂದು ಹೆಸರಿಡಲಾಗಿದೆ.
ಗ್ರಾಮದಲ್ಲಿ ಯಾರಾದರೂ ಮಾದಕ ದ್ರವ್ಯ ಸೇವನೆ, ಜೂಜು, ಬೆಟ್ಟಿಂಗ್ ಮುಂತಾದ ತಪ್ಪುಗಳನ್ನು ಮಾಡುತ್ತಿದ್ದಾರೆಯೇ ಎಂದು ತಿಳಿಯಲು ಈ ತಂಡದ ಮಹಿಳೆಯರು ಇಡೀ ಪಂಚಾಯಿತಿಯನ್ನು ಸುತ್ತುತ್ತಾರೆ. ಕುಡಿದು ಬಂದರೆ ಅವರಿಗೆ ಶಿಕ್ಷೆಯಾಗುತ್ತದೆ. ಅವರನ್ನು ನಡುಬೀದಿಯಲ್ಲಿ ಕೂರಿಸಿ ಶಿಕ್ಷಿಸಲಾಗುತ್ತದೆ. ನಂತರ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ.
ಮಹಿಳೆಯರ ಈ ಕ್ರಮ ಪೊಲೀಸರಿಗೂ ಖುಷಿ ಕೊಟ್ಟಿದೆ. ಮಹಿಳೆಯರಿಗೆ ಪೊಲೀಸ್ ಇಲಾಖೆ ಸಂಪೂರ್ಣ ಬೆಂಬಲ ನೀಡಿದೆ. ಇವರಿಂದ ಪ್ರೇರಿತರಾಗಿ ಇತರ ಗ್ರಾಮಗಳ ಮಹಿಳೆಯರೂ ಕೂಡ ಅಕ್ರಮ ಚಟುವಟಿಕೆಗಳನ್ನು ತಡೆಯಲು ಇಂಥದ್ದೇ ತಂಡಗಳನ್ನು ರಚಿಸುತ್ತಿದ್ದಾರೆ.