ಬೆಂಗಳೂರು : ವಿರೋಧ ಪಕ್ಷದ ನಾಯಕನಿಗೆ ಈ ಪರಿ ವಿರೋಧ ಸೃಷ್ಟಿಯಾಗಿದೆ ಎಂದರೆ ಅಶೋಕ್ ಅವರ ಸಂತೋಷದ ವ್ಯಾಲಿಡಿಟಿ ಶೀಘ್ರದಲ್ಲೇ ಮುಗಿಯುವ ಸೂಚನೆ ಅಲ್ಲವೇ ಎಂದು ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯವಾಡಿದೆ.
ಈ ಕುರಿತು ಎಕ್ಸ್ ನಲ್ಲಿ ಲೇವಡಿ ಮಾಡಿರುವ ಕಾಂಗ್ರೆಸ್, ವಿರೋಧ ಪಕ್ಷದ ನಾಯಕನ ಕಚೇರಿಯಿಂದ ಅಶೋಕ್ ಹೆಸರನ್ನು ತೆಗೆದರಷ್ಟೇ ಕಚೇರಿಗೆ ಹೋಗುವೆ ಎಂದು ಬಿಜೆಪಿ ಶಾಸಕ ಪಟ್ಟು ಹಿಡಿದಿದ್ದಾರೆ. ವಿರೋಧ ಪಕ್ಷದ ನಾಯಕನಿಗೆ ಈ ಪರಿ ವಿರೋಧ ಸೃಷ್ಟಿಯಾಗಿದೆ ಎಂದರೆ ಅಶೋಕ್ ಅವರ ಸಂತೋಷದ ವ್ಯಾಲಿಡಿಟಿ ಶೀಘ್ರದಲ್ಲೇ ಮುಗಿಯುವ ಸೂಚನೆ ಅಲ್ಲವೇ ಬಿಜೆಪಿ? ಯಾರು ಶತ್ರುಗಳು, ಯಾರು ಮಿತ್ರರು ಎಂದು ಸ್ವತಃ ಬಿಜೆಪಿಯವರಿಗೇ ಗೊಂದಲವಾಗುತ್ತಿದೆ ಎಂದು ಹೇಳಿದೆ.
ಆ’ಶೋಕ’ ಗೀತೆ!
◆ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಶಾಸಕ ಅಭಿನಂದಿಸಲು ಒಪ್ಪಲಿಲ್ಲ.
◆ ಸಭಾತ್ಯಾಗ ಮಾಡಿದರೆ ಬಿಜೆಪಿ ಶಾಸಕರೇ ಕುರ್ಚಿ ಬಿಟ್ಟು ಏಳಲಿಲ್ಲ.
◆ ಶಾಸಕಾಂಗ ಸಭೆಗೆ ಬರುವುದಿಲ್ಲ ಎಂದು ಬಿಜೆಪಿ ಶಾಸಕರಿಂದಲೇ ಘೇರಾವ್.
◆ ವಿರೋಧ ಪಕ್ಷದ ನಾಯಕನ ಕೊಠಡಿಗೆ ಬರಲು ಒಪ್ಪದ ಬಿಜೆಪಿ ಶಾಸಕ.
◆ ಸಭಾತ್ಯಾಗ ಮಾಡಿರುವುದಕ್ಕೆ ಸ್ವಪಕ್ಷದ ಶಾಸಕರಿಂದಲೇ ತರಾಟೆ.
◆ ಬಕೆಟ್ ರಾಜಕಾರಣಿ ಎಂದು ಬಿಜೆಪಿಗರಿಂದಲೇ ಬಿರುದು.
◆ ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ಸ್ವಪಕ್ಷದ ನಾಯಕರಿಂದಲೇ ಸದನದಲ್ಲಿ ಮಾತನಾಡಲು ಅಡ್ಡಿ.
ವಿರೋಧ ಪಕ್ಷದ ನಾಯಕನಿಗೆ ಮತ್ತೊಂದು ವಿರೋಧ ಪಕ್ಷ ಸೃಷ್ಟಿಯಾಗಿರುವಾಗ ಅಶೋಕರ ಶೋಕ ರಾಗವನ್ನು ಕೇಳುವವರು ಯಾರು? ಎಂದು ಪ್ರಶ್ನಿಸಿದೆ.