ಈ ಬಾರಿ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಈಗಾಗ್ಲೇ ಸಂಸತ್ತಿನಲ್ಲಿ 5 ಬಾರಿ ಸಾಮಾನ್ಯ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸತತ ಆರನೇ ಬಾರಿಗೆ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಬಜೆಟ್ ಮಂಡಿಸುವ ಸಂಪ್ರದಾಯದಲ್ಲಿ ಹಲವು ಬದಲಾವಣೆಗಳಾಗಿವೆ. ಎರಡು ದಶಕಗಳ ಹಿಂದೆ ಕೇಂದ್ರ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಆದರೆ ಈಗ ಸಮಯ ಬದಲಾಗಿದೆ. ಬೆಳಗ್ಗೆ 11 ಗಂಟೆಗೆ ಆಯವ್ಯಯ ಮಂಡನೆಯಾಗುತ್ತದೆ.
ಕೇಂದ್ರ ಬಜೆಟ್ ಅನ್ನು ಸಂಜೆ ಏಕೆ ಮಂಡಿಸಲಾಗುತ್ತಿತ್ತು ? ಸಮಯ ಬದಲಾಗಿದ್ದು ಹೇಗೆ ಅನ್ನೋದು ನಿಜಕ್ಕೂ ಆಸಕ್ತಿಕರ ಸಂಗತಿ. ಸ್ವಾತಂತ್ರ್ಯದ ನಂತರ ಅನೇಕ ಬ್ರಿಟಿಷ್ ಸಂಪ್ರದಾಯಗಳನ್ನು ವರ್ಷಗಳವರೆಗೆ ಅನುಸರಿಸಲಾಯಿತು. ಈ ಸಂಪ್ರದಾಯಗಳಲ್ಲಿ ಒಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸುವುದು. ಆದರೆ 1999 ರಲ್ಲಿ ಅದನ್ನು ಬದಲಾಯಿಸಲಾಯಿತು.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಅಂದಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಬಜೆಟ್ ಮಂಡನೆ ಸಮಯವನ್ನು ಸಂಜೆ 5 ರಿಂದ ಬೆಳಗ್ಗೆ 11ಕ್ಕೆ ಬದಲಾಯಿಸಿದ್ದರು. ಇದಾದ ನಂತರ ಪ್ರತಿ ವರ್ಷ ಸಾಮಾನ್ಯ ಬಜೆಟ್ ಅನ್ನು ಸಂಸತ್ತಿನಲ್ಲಿ ಬೆಳಗ್ಗೆ 11 ಗಂಟೆಗೆ ಮಂಡಿಸಲಾಗುತ್ತದೆ. 2004ರಲ್ಲಿ ರಚನೆಯಾದ ಯುಪಿಎ ಸರ್ಕಾರ ಕೂಡ ಬೆಳಗ್ಗೆ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಅನುಸರಿಸಿತ್ತು.
ಸಂಜೆ ಬಜೆಟ್ ಮಂಡನೆಗೆ ಕಾರಣ
ಸಂಜೆ ಬಜೆಟ್ ಮಂಡಿಸಲು ಪ್ರಮುಖ ಕಾರಣ ಬ್ರಿಟನ್‌ನ ಬಜೆಟ್. ಬ್ರಿಟನ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು. ಇದರಲ್ಲಿ ಭಾರತದ ಬಜೆಟ್ ಕೂಡ ಸೇರಿತ್ತು. ಅದೇ ಸಮಯದಲ್ಲಿ ಭಾರತೀಯ ಸಂಸತ್ತಿನಲ್ಲಿ ಬಜೆಟ್ ಮಂಡಿಸುವುದು ಅಗತ್ಯವಾಗಿತ್ತು. ವಾಸ್ತವವಾಗಿ ಭಾರತದಲ್ಲಿ ಸಂಜೆ 5 ಗಂಟೆಗೆ, ಬ್ರಿಟನ್‌ನಲ್ಲಿ ಬೆಳಗ್ಗೆ 11.30ರ ಸಮಯವಾಗಿರುತ್ತದೆ. ಬ್ರಿಟಿಷ್ ಸರ್ಕಾರದ ಅಡಿಯಲ್ಲಿ ಪ್ರಾರಂಭವಾದ ಸಂಪ್ರದಾಯವನ್ನು ಸ್ವಾತಂತ್ರ್ಯ ನಂತರವೂ ಮುಂದುವರೆಸಲಾಯಿತು.
ಮೋದಿ ಸರ್ಕಾರ ಪ್ರತಿ ವರ್ಷ ಫೆಬ್ರವರಿ 28 ರಂದು ಮಂಡಿಸುತ್ತಿದ್ದ ಸಾಮಾನ್ಯ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲು ಪ್ರಾರಂಭಿಸಿತು. ಇದರೊಂದಿಗೆ ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬಂದಿದ್ದ ರೈಲ್ವೇ ಬಜೆಟ್‌ನ ಸಂಪ್ರದಾಯ ಮೋದಿ ಅಧಿಕಾರಾವಧಿಯಲ್ಲಿ ಕೊನೆಗೊಂಡಿದೆ. ಸರ್ಕಾರವು ಸಾಮಾನ್ಯ ಬಜೆಟ್‌ನಲ್ಲಿ ಪ್ರತ್ಯೇಕ ರೈಲ್ವೆ ಬಜೆಟ್ ಅನ್ನು ಸಹ ಸೇರಿಸಿದೆ. ರೈಲ್ವೆ ಬಜೆಟ್ ಸಂಪ್ರದಾಯವನ್ನು ಕೊನೆಗಾಣಿಸುವ ಸಲಹೆಯನ್ನು ಆಗಿನ ರೈಲ್ವೆ ಸಚಿವ ಸುರೇಶ್ ಪ್ರಭು ನೀಡಿದ್ದರು.