ಅಂತರ್ಜಾಲವು ತಿಳಿವಳಿಕೆ ಮತ್ತು ಆಸಕ್ತಿದಾಯಕ ವಿಷಯಗಳ ಆಗರವಾಗಿದೆ. ವಿಲಕ್ಷಣ ವಿಡಿಯೋಗಳ ಜೊತೆಗೆ ಕೆಲವೊಮ್ಮೆ ಅಸಹ್ಯಕರ ವಿಡಿಯೋಗಳೂ ಶೇರ್ ಆಗುತ್ತವೆ. ಜಪಾನ್‌ನ ಒಂದು ವಿಡಿಯೋ ನೆಟ್ಟಿಗರನ್ನು ಗಾಬರಿಗೊಳಿಸಿರುವುದು ಮಾತ್ರವಲ್ಲದೇ ಅವರನ್ನು ಕಳವಳಗೊಳಿಸಿದೆ.
ಕನ್ವೇಯರ್ ಬೆಲ್ಟ್‌ನಲ್ಲಿ ಆಹಾರವನ್ನು ಬಡಿಸುವ ಸುಶಿ ರೆಸ್ಟೋರೆಂಟ್‌ಗಳಲ್ಲಿ ಕೆಲವು ಜಪಾನೀ ಯುವಕರು ಕುಳಿತಿರುವುದನ್ನು ಈ ವೈರಲ್ ವಿಡಿಯೋಗಳಲ್ಲಿ ನೋಡಬಹುದು. ಪುರುಷರು ಕಪಾಟಿನಲ್ಲಿ ಇರಿಸಲಾದ ಬಟ್ಟಲುಗಳನ್ನು ನೆಕ್ಕುವುದನ್ನು ಮತ್ತು ಆಹಾರವನ್ನು ಹಾಳುಮಾಡುವುದನ್ನು ನೋಡಬಹುದಾಗಿದೆ. ಒಬ್ಬ ವ್ಯಕ್ತಿಯು ಸುಶಿಯ ತುಂಡನ್ನು ಎತ್ತಿಕೊಂಡು, ಅದರಲ್ಲಿ ಅರ್ಧವನ್ನು ತಿನ್ನುವುದನ್ನು ಮತ್ತು ಇನ್ನರ್ಧವನ್ನು ತಟ್ಟೆಯಲ್ಲಿ ಇಡುವುದನ್ನು ಸಹ ಒಂದು ವಿಡಿಯೋ ತೋರಿಸಿದೆ.
ಇದು ಟಿಕ್‌ಟಾಕ್‌ನಲ್ಲಿ ಸುತ್ತುತ್ತಿರುವ ಟ್ರೆಂಡಿಂಗ್ ತಮಾಷೆಯ ಭಾಗವಾಗಿದೆ ಮತ್ತು ಜಪಾನೀಸ್ ಸಾಮಾಜಿಕ ಮಾಧ್ಯಮದಲ್ಲಿಯೂ ವೈರಲ್ ಆಗಿದೆ. ವಾಷಿಂಗ್ಟನ್ ಪೋಸ್ಟ್‌ನ ವರದಿಯ ಪ್ರಕಾರ, ವಿಡಿಯೋಗಳು ಪ್ರತಿಯೊಂದೂ ಲಕ್ಷಾಂತರ ವೀಕ್ಷಣೆಗಳನ್ನು ಸೃಷ್ಟಿಸಿವೆ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಇದು ಸುಶಿ ಭಯೋತ್ಪಾದನೆಗೆ ಚಿಕ್ಕದಾದ “ಸುಶಿ ಟೆರೋ” ಎಂಬ ಹೊಸ ಪದಕ್ಕೆ ಜನ್ಮ ನೀಡಿದೆ.
ಆ ವಿಡಿಯೋಗಳು ವೈರಲ್ ಆದ ನಂತರ ಭಾರಿ ಸುದ್ದಿಯಾಗಿದ್ದು, ಹೋಟೆಲ್ ನಷ್ಟ ಅನುಭವಿಸಿದೆ. ನಂತರ ಈ ವಿಡಿಯೋದಲ್ಲಿ ಕಂಡುಬಂದಿರುವ ಯುವಕರ ಪಾಲಕರು ಕ್ಷಮೆ ಕೋರಿದ್ದಾರೆ.