ಮಧ್ಯಪ್ರದೇಶದ ಮೊರೆನಾದಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ನವೆಂಬರ್ 17-18 ರ ರಾತ್ರಿ, ಅಪ್ರಾಪ್ತ ಬಾಲಕಿಯೊಬ್ಬಳು ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ 14 ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಬಂದಿದ್ದು, ಆದರೆ ಆಸ್ಪತ್ರೆ ಸಿಬ್ಬಂದಿ ಗರ್ಭಿಣಿ ಎಂಬುದನ್ನು ಅರಿತು ಆಕೆಯನ್ನು ಸೇರಿಸಿರಲಿಲ್ಲ. ಇದಾದ ಬಳಿಕ ಮನೆಯವರು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ ಮಾರ್ಗಮಧ್ಯೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಾಹಿತಿ ಪಡೆದ ಪೊಲೀಸ್ ತಂಡ ತರಾತುರಿಯಲ್ಲಿ ಆಸ್ಪತ್ರೆ ತಲುಪಿದ್ದು, ಅಪ್ರಾಪ್ತ ಬಾಲಕಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, 14-15 ವರ್ಷದ ಅಪ್ರಾಪ್ತ ಬಾಲಕಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಆ ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದು, ಮಗಳನ್ನು ದಾಖಲಿಸಲು ಯತ್ನಿಸಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಆಕೆಯನ್ನು ದಾಖಲು ಮಾಡಿಕೊಳ್ಳುವ ಸೌಲಭ್ಯವಿಲ್ಲ ಎಂದು ಹೇಳಿ ಅವರನ್ನು ವಾಪಸ್ ಕಳುಹಿಸಿದ್ದಾರೆ. ಇದನ್ನು ಕೇಳಿದ ಮನೆಯವರು ಮಗಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದು, ಆದರೆ ಈ ವೇಳೆ ಹುಡುಗಿಯ ನೋವು ಮತ್ತಷ್ಟು ಹೆಚ್ಚಾಯಿತು.
ನೋವಿನ ನಡುವೆ ಆಕೆ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಯ ನಂತರ, ಕುಟುಂಬವು ಆಘಾತಕ್ಕೊಳಗಾಗಿದೆ. ಬಾಲಕಿಗೆ ಸಾಮಾನ್ಯ ನೋವು ಇಲ್ಲ, ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಬಳಿಕ ಮನೆಯವರು ತಾಯಿ ಮತ್ತು ಮಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಂದೆಡೆ, ಹೆರಿಗೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಕೊತ್ವಾಲಿ ಪೊಲೀಸರು ಮತ್ತು ಸಿವಿಲ್ ಲೈನ್ ಪೊಲೀಸರು ಆಸ್ಪತ್ರೆಗೆ ತಲುಪಿದರು. ಆಕೆಯ ಹೇಳಿಕೆಯನ್ನು ಪಡೆದುಕೊಂಡಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.