ಶಿವಮೊಗ್ಗ : ಕೊನೆಗೂ ರೈತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದ್ದು, ಇಂದಿನಿಂದಲೇ ಶಿವಮೊಗ್ಗದ ಭದ್ರಾ ಡ್ಯಾಂ ನಿಂದ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಿದೆ.
ಶಿವಮೊಗ್ಗ ಭದ್ರಾ ಡ್ಯಾಂ ನಿಂದ ಭದ್ರಾ ಕಾಲುವೆಗೆ ನೀರು ಬಿಡುಗಡೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಉರುಳು ಸೇವೆ ಮಾಡಿದ್ದರು. ಒಟ್ಟು 43 ದಿನಗಳ ಕಾಲ ಶಿವಮೊಗ್ಗದ ಭದ್ರಾ ಡ್ಯಾಂ ನಿಂದ ಬಲದಂಡೆ ಕಾಲುವೆಗೆ ನೀರು ಹರಿಸಲು ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ಮಾಹಿತಿ ನೀಡಿದ್ದು, ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 15 ರವರೆಗೆ ಒಟ್ಟು 20 ದಿನಗಳು ಹಾಗೂ ಅಕ್ಟೋಬರ್ 26 ರಿಂದ ನವೆಂಬರ್ 17 ರವರೆಗೆ ಒಟ್ಟು 23 ದಿನಗಳು ನೀರನ್ನು ಹರಿಸಲಾಗುವುದು ಎಂದಿದ್ದಾರೆ. ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಸಲಾಗಿದ್ದು, ಅಕ್ಟೋಬರ್ 1 ರವರೆಗೆ ಒಟ್ಟು 15 ದಿನಗಳು ನೀರನ್ನು ಹರಿಸಲಾಗುತ್ತದೆ. ಬಳಿಕ ಅಕ್ಟೋಬರ್ 12 ರಿಂದ 26 ರವರೆಗೆ ಒಟ್ಟು 15 ದಿನಗಳು ಹಾಗೂ ನವೆಂಬರ್ 6 ರಿಂದ 17 ರವರೆಗೆ ಒಟ್ಟು 12 ದಿನಗಳು ನೀರನ್ನು ಹರಿಸಲಾಗುದು ಎಂದು ಮಾಹಿತಿ ನೀಡಿದ್ದಾರೆ.
ತಕ್ಷಣಕ್ಕೆ ಭದ್ರಾ ಡ್ಯಾಂನಿಂದ ಭದ್ರಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು. ಭದ್ರಾ ಡ್ಯಾಂನಿಂದ ಬಲದಂಡೆ ನಾಲೆಯಲ್ಲಿ ನೂರು ದಿನಗಳ ಕಾಲ ನೀರು ಹರಿಸಲು ಆಗ್ರಹಿಸಿ ಭಾರತೀಯ ರೈತ ಒಕ್ಕೂಟದಿಂದ ದಾವಣಗೆರೆ ಬಂದ್ ನಡೆಸಲಾಗಿತ್ತು. . ಭದ್ರಾ ಡ್ಯಾಂನ ಬಲದಂಡೆ ನಾಲೆಯಲ್ಲಿ ನೀರು ಹರಿಸುವುದಾಗಿ ಭರವಸೆ ಕೊಟ್ಟಿದ್ದ ಸರ್ಕಾರ ಉಲ್ಟಾ ಹೊಡೆದಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದರು. ರೈತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದ್ದು, ಇಂದಿನಿಂದಲೇ ಶಿವಮೊಗ್ಗದ ಭದ್ರಾ ಡ್ಯಾಂ ನಿಂದ ಬಲದಂಡೆ ಕಾಲುವೆಗೆ ನೀರು ಹರಿಸಲು ನಿರ್ಧರಿಸಿದೆ.