ಬೆಂಗಳೂರು : ರಾಜ್ಯದಲ್ಲಿ ಉಂಟಾದ ವಿದ್ಯುತ್ ಕೊರತೆ ನೀಗಿಸಲು ಬೇರೆ ರಾಜ್ಯಗಳಿಂದ ಕಲ್ಲಿದ್ದಲು ಖರೀದಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂಧನ ಇಲಾಖೆಯ ಜೊತೆ ಪರಿಶೀಲನೆ ಸಭೆ ನಡೆಯುತ್ತಿದೆ. ಸಭೆಯಲ್ಲಿ ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ವಿದ್ಯುತ್ ಕೊರತೆ ನೀಗಿಸಲು ಬೇರೆ ರಾಜ್ಯಗಳಿಂದ ಕಲ್ಲಿದ್ದಲು ಖರೀದಿ ಬಗ್ಗೆ ಇಂಧನ ಇಲಾಖೆ ಚಿಂತನೆ ನಡೆಸಿದೆ. ಹಾಗೂ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆಗುತ್ತಿರುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಸಭೆಯಲ್ಲಿ ಇಂಧನ ಸಚಿವ ಕೆ.ಜೆ ಚಾರ್ಜ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದಾರೆ.
ರಾಜ್ಯದಲ್ಲಿ ಉಂಟಾದ ವಿದ್ಯುತ್ ಸಮಸ್ಯೆಯಿಂದ ರೈತರು ಹೈರಾಣಾಗಿದ್ದು, ನೀರಿಲ್ಲದೇ ಬೆಳೆಗಳು ಒಣಗುತ್ತಿದೆ. ರೈತರ ಕೃಷಿ ಪಂಪ್ ಸೆಟ್ ಗಳಿಗೆ ದಿನಕ್ಕೆ 10 ಗಂಟೆ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಕಿಡಿಕಾರಿದ ಬಿಜೆಪಿ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲಿಂದ ನೇಕಾರರ ಬದುಕಿಗೆ ಮರಣ ಶಾಸನ ಬರೆಯುತ್ತಿದೆ ಎಂಬುದಕ್ಕೆ ತುಮಕೂರು ಜಿಲ್ಲೆಯೊಂದರಲ್ಲೇ 150ಕ್ಕೂ ಹೆಚ್ಚು ನೇಕಾರರ ಕುಟುಂಬಗಳು ಬೀದಿಗೆ ಬಿದ್ದಿರುವುದು ತಾಜಾ ನಿದರ್ಶನ. ಕಾಂಗ್ರೆಸ್ ಸರ್ಕಾರ ತಂದೊಡ್ಡಿರುವ ವಿದ್ಯುತ್ ಲೋಡ್ಶೆಡ್ಡಿಂಗ್ ಕೃಪೆಯಿಂದಾಗಿ ಪಾರಂಪರಿಕ ನೇಕಾರಿಕಾ ಕಲೆಗಾರಿಕೆಗೂ ನಶಿಸುವ ಅಪಾಯ ತಲೆದೋರುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಇಂಧನ ಸಚಿವ ಮಾತ್ರ ಕರೆಂಟ್ ಇಲ್ಲದ ಕತ್ತಲಿನಲ್ಲಿ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.