ಬೆಂಗಳೂರು : ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರಿಗೆ ಕೋಟಾ ಆರಂಭಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ರಾಜ್ಯದ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ 508 ಹೆಚ್ಚುವರಿ ಸೂಪರ್ ನ್ಯೂಮರರಿ ಎಂಬಿಬಿಬಿಎಸ್ ಸೀಟು ಸೃಷ್ಟಿಸುವ ಮೂಲಕ ಎನ್.ಆರ್.ಐ ಕೋಟಾ ಮಂಜೂರು ಮಾಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ರಾಜ್ಯ ಸರ್ಕಾರದ ಪರವಾಗಿ ವೈದ್ಯಕೀಯ ಶಿಕ್ಷಣ ಸಚಿವರು ಪತ್ರ ಬರೆದಿದ್ದಾರೆ. ಈಗಾಗಲೇ ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಪುದುಚೇರಿಗಳಲ್ಲಿ 7% ಇಂದ 15% ವರೆಗೆ ಎನ್ಆರ್ಐ ಕೋಟಾವನ್ನು ನೀಡಲಾಗಿದ್ದು, ಇದೇ ಮಾದರಿಯಲ್ಲಿ ರಾಜ್ಯಕ್ಕೂ ನೀಡಬೇಕೆಂದು ಕೋರಲಾಗಿದೆ.
ಲಭ್ಯವಿರುವ ಸೀಟುಗಳ ಒಳಗೆ ಎನ್ ಆರ್ ಐ ಕೋಟಾ ರಚನೆ ಮಾಡಿದಲ್ಲಿ ಬಡವರಿಗೆ ಹಾಗೂ ಹಿಂದುಳಿದ ಸಮುದಾಯಗಳಿಗೆ ಸೀಟುಗಳ ಸಂಖ್ಯೆ ಕಡಿಮೆಯಾಗಿ ಅವರಿಗೆ ಅನ್ಯಾಯವಾಗುತ್ತದೆ. ಹೀಗಾಗಿ 15% ಎನ್ ಆರ್ ಐ ಕೋಟಾವನ್ನು ಹೆಚ್ಚುವರಿಯಾಗಿ ಆರಂಭಿಸುವ ಅಗತ್ಯವಿದೆ ಎಂಬುದನ್ನು ಪತ್ರದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.