alex Certify BIG NEWS : ಕನ್ನಡಿಗರಿಗೆ ಸಿಹಿಸುದ್ದಿ ನೀಡಿ ‘ಯೂ ಟರ್ನ್’ ಹೊಡೆದ ರಾಜ್ಯ ಸರ್ಕಾರ : ಬಿಜೆಪಿ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಕನ್ನಡಿಗರಿಗೆ ಸಿಹಿಸುದ್ದಿ ನೀಡಿ ‘ಯೂ ಟರ್ನ್’ ಹೊಡೆದ ರಾಜ್ಯ ಸರ್ಕಾರ : ಬಿಜೆಪಿ ಕಿಡಿ

ಬೆಂಗಳೂರು : ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಸಂಬಂಧ ಕನ್ನಡಿಗರಿಗೆ ಸಿಹಿಸುದ್ದಿ ನೀಡಿ ರಾಜ್ಯ ಸರ್ಕಾರ ಯೂ ಟರ್ನ್ ಹೊಡೆದಿದೆ ಎಂದು ಬಿಜೆಪಿ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ “ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ? ಅಪಮಾನಿಸಲು ನಿಮಗೆ ಕನ್ನಡಿಗರೇ ಬೇಕಿತ್ತೆ?” ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ದಿಢೀರ್ ತಡೆಹಿಡಿದು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅಪಮಾನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ರಣಹೇಡಿ ನಿರ್ಧಾರವನ್ನು ಸಮಸ್ತ ಕರುನಾಡ ಜನರ ಪರವಾಗಿ ಖಂಡಿಸುವೆ.

‘ಈ ನೆಲದಲ್ಲಿ ಬದುಕು ಮಾಡುತ್ತ ಕನ್ನಡ ಕಲಿತವರೆಲ್ಲ ಕನ್ನಡಿಗರೇ’ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಹೋರಾಟದ ಬೇಡಿಕೆಗೆ ನಿನ್ನೆಯಷ್ಟೇ ‘ಅಸ್ತು ‘ಎಂದು ಹೆಜ್ಜೆ ಇಟ್ಟಿದ್ದ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’ ಹೊಡೆದಿರುವುದೇಕೆ? ಮುಖ್ಯಮಂತ್ರಿಗಳು ಈ ಕುರಿತು ತಮ್ಮ X ಖಾತೆಯಲ್ಲಿ ಮೂರು ಬಾರಿ ‘ಯೂ ಟರ್ನ್ ಹೊಡೆದು’ ಕೊನೆಗೂ ವಿಧೇಯಕ ಸದ್ಯಕ್ಕೆ ಮಂಡಿಸುತ್ತಿಲ್ಲ ಎನ್ನುವ ಅಂಜುಬುರುಕ ನಿರ್ಧಾರದ ಹಿಂದೆ ನಾಡಿನ ಆತ್ಮ ಗೌರವ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡತನವನ್ನು ಹಿಮ್ಮೆಟ್ಟಿಸುವ ಕರ್ನಾಟಕ ವಿರೋಧಿ ಶಕ್ತಿಗಳ ಲಾಬಿ ಮೇಲುಗೈ ಸಾಧಿಸಿರುವಂತಿದೆ. ಇಂಡಿ ಕೂಟದಲ್ಲಿ ಯಾವಾಗ ಬಿರುಕು ಮೂಡುತ್ತದೋ ಎಂಬ ಭೀತಿಯಲ್ಲಿರುವ ದೆಹಲಿಯ ದೊಡ್ಡ ‘ಕೈ’ ಮುಖ್ಯಮಂತ್ರಿಗಳ ಕೈ ಕಟ್ಟಿಹಾಕಿರಲೇಬೇಕು, ಇಲ್ಲದಿದ್ದರೇ ಕನ್ನಡಿಗರ ಬದುಕು ಹಸನಾಗಿಸುವ ವಿಧೇಯಕವನ್ನು ಬದಿಗೆ ಸರಿಸುವ ಪಲಾಯನವಾದಿ ನಿರ್ಧಾರ ಕೈಗೊಳ್ಳಲು ಹೇಗೆ ಸಾಧ್ಯ?

ಸದ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಮುತ್ತಿರುವ ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳಿಂದ ತತ್ತರಿಸಿರುವ ಕಾಂಗ್ರೆಸ್ ತನ್ನ ಮುಖ ಮುಚ್ಚಿಕೊಳ್ಳಲು ಹಗರಣದ ಚರ್ಚೆ ಹಾಗೂ ತನಿಖೆಯನ್ನು ದಿಕ್ಕು ತಪ್ಪಿಸಲು ಹಾಗೂ ಜನರ ಗಮನ ವಿಚಲಿತಗೊಳಿಸುವ ಕುತಂತ್ರದಿಂದ ಕನ್ನಡ ಪರ ವಿಧೇಯಕವನ್ನು ತಡೆಹಿಡಿದು ಗುರಾಣಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದರೆ ರಾಜ್ಯದ ಜನತೆ ಕಾಂಗ್ರೆಸ್ಸಿಗರನ್ನು ಎಂದಿಗೂ ಕ್ಷಮಿಸರು. ವಿಧೇಯಕದ ಕುರಿತು ಮಾಧ್ಯಮಗಳಲ್ಲಿ ಹೆಮ್ಮೆಯಿಂದ ಬೀಗಿದ್ದ ಸಚಿವರುಗಳು ಹಾಗೂ ಕಾಂಗ್ರೆಸ್ ಮುಖಂಡರು ಕೆಲವೇ ಸಮಯದ ಅಂತರದಲ್ಲಿ ನಾಡ ಜನರ ಬಗೆಗಿನ ಐತಿಹಾಸಿಕ ವಿಧೇಯಕ ಹಿಂತೆಗೆದುಕೊಂಡ ಬಗ್ಗೆ ಸಮಸ್ತ ಕನ್ನಡ ಜನತೆಯ ಮುಂದೆ ತಲೆ ಎತ್ತಿ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಅರ್ಹತೆ ಇದ್ದರೂ ಉದ್ಯೋಗಾವಕಾಶಗಳಿಂದ ವಂಚಿತರಾಗಿ ಹತಾಶೆಗೊಳಗಾಗಿದ್ದ ಗ್ರಾಮೀಣ ಭಾಗದ ಲಕ್ಷಾಂತರ ನಿರುದ್ಯೋಗಿಗಳಿಗೆ ಭರವಸೆಯ ಬೆಳಕು ಮೂಡಿಸಿದ್ದ ಕನ್ನಡಿಗರ ಉದ್ಯೋಗ ಮೀಸಲಾತಿಯ ವಿಧೇಯಕ ಪ್ರಸಕ್ತ ಅಧಿವೇಶನದಲ್ಲೇ ಸರ್ಕಾರ ಮಂಡಿಸಲಿ, ಇಲ್ಲವೇ ಕನ್ನಡಿಗರ ಆಕ್ರೋಶ ಎದುರಿಸಲು ಸಿದ್ದವಾಗಲಿ ಎಂದು ಕಿಡಿಕಾರಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...