ಬೆಳಗಾವಿ : ನ್ಯಾಯವಾದಿಗಳ ಮೇಲೆ ಅಲ್ಲಲ್ಲಿ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಿಂಸಾಚಾರಗಳನ್ನು ತಡೆಯುವ ಹಾಗೂ ಶಿಕ್ಷೆ ವಿಧಿಸುವ ನ್ಯಾಯವಾದಿಗಳ ಮೇಲೆ ಹಿಂಸಾಚಾರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ನಾನು ಕೂಡ ಕಾನೂನು ಪದವಿ ಪಡೆದು ವಕೀಲನಾಗಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ವಕೀಲ ವೃತ್ತಿಯಲ್ಲಿ ಎದುರಾಗುವ ಸವಾಲುಗಳ ಅನುಭವ ಮತ್ತು ಅರಿವು ಇದೆ. ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವ ಸಂದರ್ಭದಲ್ಲಿ ವಕೀಲರು ಎದುರಿಸಬಹುದಾದ ಬೆದರಿಕೆ, ಹಲ್ಲೆ, ವೈಯಕ್ತಿಕ ನಿಂದನೆ ಇಂಥವುಗಳಿಂದ ರಕ್ಷಣೆ ನೀಡುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ ಎಂದು ಭಾವಿಸಿ, “ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ – 2023” ಅನ್ನು ಇಂದಿನ ಅಧಿವೇಶನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.
ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರೂ ಭಯಮುಕ್ತರಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನೊಂದವರಿಗೆ ನ್ಯಾಯ ಸಿಗಲು ಸಾಧ್ಯ. ಇಂತಹ ನಿರ್ಭೀತ ವಾತಾವರಣ ನಿರ್ಮಾಣ ಮಾಡಲು ನಾವು ಬದ್ಧ ಎಂಬುದನ್ನು ಮತ್ತೊಮ್ಮೆ ನಾಡಿನ ವಕೀಲ ಬಂಧುಗಳಿಗೆ ಖಾತ್ರಿಪಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.