ಬೆಂಗಳೂರು : ಕನ್ನಡದ ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ.
ಇತ್ತೀಚೆಗಷ್ಟೇ ತೆರೆಕಂಡ ಸಿನಿಮಾ ಸಿನಿಪ್ರಿಯರ ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ಕಳೆದ 2 ದಿನದ ಹಿಂದೆ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಚಿತ್ರತಂಡ ತೆರಿಗೆ ವಿನಾಯಿತಿ ಮಾಡಿ, ಬಿಡುವು ಮಾಡಿಕೊಂಡು ಸಿನಿಮಾ ನೋಡಿ ಎಂದು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸರ್ಕಾರ ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದೆ.
* ಚಿತ್ರತಂಡದ ಮನವಿ
“ಒಂದಿಡೀ ತಲೆಮಾರನ್ನು ತಮ್ಮ ಮಾತು, ಕೃತಿ, ಜೀವನದಿಂದ ಅಪಾರವಾಗಿ ಪ್ರಭಾವಿಸಿರುವ ಕನ್ನಡದ ಪ್ರಸಿದ್ಧ ಲೇಖಕ, ಚಿಂತಕ ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ ಕೃತಿ ಡೇರ್ ಡೆವಿಲ್ ಮುಸ್ತಫಾ ಎಂಬ ಸಣ್ಣ ಕಥೆಯನ್ನು ಆಧರಿಸಿ ಸಿನಿಮಾ ತಂಡವು ಶಶಾಂಕ್ ಸೋಗಾಲ ನಿರ್ದೇಶನದಲ್ಲಿ ಡೇರ್ ಡೆವಿಲ್ ಮುಸ್ತಫಾ’ ಎಂಬ ಸಿನಿಮಾ ನಿರ್ಮಾಣ ಮಾಡಿದೆ, ಕೋಮುಸಾಮರಸ್ಯ ಹಾಗೂ ಬಾವೈಕ್ಯತೆಯ ಸಂದೇಶ ಸಾರುವ ಈ ಸಿನಿಮಾ ಈಗಾಗಲೇ ಬಿಡುಗಡೆಗೊಂಡು ಅಪಾರ ಜನರ ಮನ್ನಣೆಗಳಿಸುತ್ತಿದೆ, ತೇಜಸ್ವಿ ಓದುಗರು, ಅಭಿಮಾನಿಗಳು, ತೇಜಸ್ವಿಯವರ ಕುಟುಂಬ ವರ್ಗ, ಈ ಸಿನಿಮಾವನ್ನು ನೋಡಿ ಪ್ರಶಂಸಿಸುತ್ತಿದ್ದಾರೆ, ಕರ್ನಾಟಕ ರಾಜ್ಯವು ಸರ್ವಜನಾಂಗದ ಶಾಂತಿಯ ತೋಟವಾಗಲು ಇಂತಹ ಸಿನಿಮಾಗಳು ಜನರಿಗೆ ಹೆಚ್ಚುಹೆಚ್ಚು ತಲುಪಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ, ತಾವು ಸಾಧ್ಯವಾದಲ್ಲಿ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡಬೇಕೆಂದು ವಿನಂತಿಸಿಕೊಳ್ಳುತ್ತೇವೆ, ಹಾಗೂ ಇನ್ನಷ್ಟು ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸಿನಿಮಾ ನೋಡಲು ಅನುಕೂಲವಾಗುವಂತೆ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡುತ್ತೇವೆ””.