ಹೊಟ್ಟೆ, ಸೊಂಟ, ನಿತಂಬ ಭಾಗ ಕಡಿಮೆಯಾಗಬೇಕೆಂದರೆ ತಲೆನೋವು ಬರಬಾರದು ಅಂತಿದ್ದರೆ ಚಕ್ರಾಸನ ಸೂಕ್ತ ವ್ಯಾಯಾಮ.
ಪ್ರಯೋಜನ
ಪ್ರತಿದಿನ ಈ ರೀತಿಯ ಆಸನ ಮಾಡುವುದರಿಂದ ಹಲವಾರು ಅನುಕೂಲಗಳು ಉಂಟು. ದೇಹ ತೂಕ ಕಡಿಮೆ ಮಾಡಿಕೊಳ್ಳಲು, ದೇಹದಲ್ಲಿ ಸೇರಿರುವ ಕೊಬ್ಬು ಕಡಿಮೆ ಮಾಡಲು, ದೇಹದಲ್ಲಿನ ಖಂಡಗಳು ಉತ್ತೇಜನಗೊಳ್ಳಲು, ದೇಹಕ್ಕೆ ರಕ್ತ ಸರಬರಾಜು ಸರಾಗವಾಗಿ ಸಾಗಲು ಈ ಆಸನ ಮಾಡುವುದು ಒಳ್ಳೆಯದು.
ಇದರಿಂದ ಥೈರಾಯಿಡ್ ಸಮಸ್ಯೆ ಕೂಡ ನಿಯಂತ್ರಣದಲ್ಲಿರುತ್ತದೆ. ಸೊಂಟ ಮತ್ತು ಶ್ವಾಸ ಸಮಸ್ಯೆಗಳು ಹತೋಟಿಯಲ್ಲಿರುತ್ತದೆ.
ಮಾಡುವುದು ಹೇಗೆ?
ಮೊದಲು ಮಾಟ್ ಮೇಲೆ ಅಂಗಾತ ಮಲಗಬೇಕು. ಕೈಗಳನ್ನು ನೆಲಕ್ಕೆ ಸಮಾಂತರವಾಗಿರಿಸಬೇಕು. ಕಾಲುಗಳನ್ನು ಮೊಳಕಾಲಿನವರೆಗೆ ಮಡಚಿಕೊಳ್ಳಬೇಕು. ಹಾಗೆಯೇ ಪಾದಗಳನ್ನು ನೆಲಕ್ಕೆ ತಾಗುವಂತೆ ಇರಿಸಬೇಕು.
ಈಗ ನಿಧಾನವಾಗಿ ಕೈಗಳನ್ನು ಮೇಲಕ್ಕೆ ಏರಿಸಿ ಮೊಳಕೈವರೆಗೆ ಮಡಚಿ ಅಂಗೈಯನ್ನು ಭುಜಕ್ಕೆ ಹತ್ತಿರ ನೆಲದ ಮೇಲೆ ಇಡಬೇಕು. ಶ್ವಾಸ ತೆಗೆದುಕೊಳ್ಳುತ್ತಾ ನಿಧಾನವಾಗಿ ಸೊಂಟ ಹಾಗೂ ಎದೆಯನ್ನು ಎತ್ತುವ ಪ್ರಯತ್ನ ಮಾಡಬೇಕು.
ಸಾಧ್ಯವಾದಷ್ಟು ಸೊಂಟದ ಭಾಗ ಮೇಲಕ್ಕೆತ್ತಬೇಕು. ದೇಹದ ಭಾರ ಒಟ್ಟು ಅಂಗಾಲು ಅಂಗೈ ಮೇಲಿರಬೇಕು. ಆಗ ಆಸನ ಸರಿಯಾಗಿ ಆಗಿ ದೇಹ ಚಕ್ರದಂತೆ ಇರುತ್ತದೆ. ಈ ಆಸನವನ್ನು ಹೃದ್ರೋಗಿಗಳು, ಸೊಂಟ ನೋವು ಮತ್ತು ಹೈಬಿಪಿ ಇರುವವರು ಮಾಡಬಾರದು.