ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉತ್ತರ ಕೊರಿಯಾ ಭೇಟಿಯನ್ನು ಮುಗಿಸಿ ವಿಯೆಟ್ನಾಂ ತಲುಪಿದ್ದಾರೆ. ಇದಕ್ಕೂ ಮುನ್ನ ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್ ಜೊತೆಗೆ ಕಾರಿನಲ್ಲಿ ಸವಾರಿ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಉಭಯ ನಾಯಕರು ರಷ್ಯಾ ನಿರ್ಮಿತ ಔರಸ್ ಲಿಮೋಸಿನ್ ಕಾರಿನಲ್ಲಿ ಓಡಾಡಿದ್ದಾರೆ.
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೂಡ ಐಷಾರಾಮಿ ವಿದೇಶಿ ಕಾರುಗಳನ್ನು ಇಷ್ಟಪಡುತ್ತಾರೆ. ಅವರ ಬಳಿ ಇಂತಹ ಲಕ್ಷುರಿ ಕಾರುಗಳು ಸಾಕಷ್ಟಿವೆ. ಇವುಗಳನ್ನು ಕಳ್ಳಸಾಗಣೆ ಮಾಡಿರಬಹುದೆಂದು ಹೇಳಲಾಗುತ್ತದೆ. ಏಕೆಂದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು, ಉತ್ತರ ಕೊರಿಯಾಕ್ಕೆ ಐಷಾರಾಮಿ ಸರಕುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿವೆ.
ಪುಟಿನ್ ಬಳಿಯಿದೆ ಅಪರೂಪದ ಕಾರು
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ಕಾರು ಅದ್ಭುತವಾಗಿದೆ. ಔರಸ್ ಸೆನೆಟ್ ಎಂಬ ಹೆಸರಿನ ಈ ಕಾರು, ಸೋವಿಯತ್ ಯುಗದ ZIL ಲಿಮೋಸಿನ್‌ನ ರೆಟ್ರೊ ಶೈಲಿಯಲ್ಲಿದೆ. ಇದು Mercedes-Benz S 600 Guard Pullman ಅನ್ನು ಹಿಂದಿಕ್ಕಿತ್ತು. ಮೇ ತಿಂಗಳಲ್ಲಿ ಕ್ರೆಮ್ಲಿನ್ ಉದ್ಘಾಟನಾ ಸಮಾರಂಭಕ್ಕಾಗಿ ಪುಟಿನ್ ಔರಸ್ ಸೆನೆಟ್‌ನಲ್ಲಿ ಸವಾರಿ ಮಾಡಿದರು.
ಔರಸ್ ಸೆನೆಟ್ ಅನ್ನು ‘ಕಾರ್ಟೆಜ್’ ಯೋಜನೆಯ ಭಾಗವಾಗಿ ರಷ್ಯಾದಲ್ಲಿ NAMI ಅಭಿವೃದ್ಧಿಪಡಿಸಿದೆ. NAMI ರಷ್ಯಾದಲ್ಲಿ ಆಟೋಮೋಟಿವ್ ಉದ್ಯಮದ ಅಭಿವೃದ್ಧಿಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೈಜ್ಞಾನಿಕ ಸಂಸ್ಥೆ. ಅಧ್ಯಕ್ಷರ ವಾಹನದಲ್ಲಿ ನಿರೀಕ್ಷಿಸಲಾದ ಎಲ್ಲಾ ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ. ಭದ್ರತೆ ಮತ್ತು ಸಂವಹನಕ್ಕೆ ಸಂಬಂಧಿಸಿದ ಎಲ್ಲಾ ಫೀಚರ್‌ಗಳು ಈ ಕಾರಿನಲ್ಲಿವೆ.
ಈ ಕಾರು ಸಂಪೂರ್ಣ ಬುಲೆಟ್ ಪ್ರೂಫ್. ಬಾಂಬ್ ಬಿದ್ದರೂ ಉಡೀಸ್ ಆಗದಷ್ಟು ಗಟ್ಟಿಮುಟ್ಟಾಗಿದೆಯಂತೆ. ಕಾರು ಸಂಪೂರ್ಣವಾಗಿ ಶಸ್ತ್ರಸಜ್ಜಿತವಾಗಿದೆ. ಆರು ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮೀ ವೇಗವನ್ನು ಸಾಧಿಸಬಲ್ಲದು. ಇದರ ಗರಿಷ್ಠ ವೇಗ ಗಂಟೆಗೆ 249 ಕಿಮೀ. ಪುಟಿನ್ ವಿದೇಶ ಪ್ರವಾಸದ ಸಂದರ್ಭದಲ್ಲಿ ಈ ಕಾರನ್ನು ಬಳಸುತ್ತಾರೆ. ಇದನ್ನು ಇಲ್ಯುಶಿನ್ ಐಎಲ್ -76 ಸಾರಿಗೆ ವಿಮಾನದ ಮೂಲಕ ಗಮ್ಯಸ್ಥಾನಕ್ಕೆ ಸಾಗಿಸಲಾಗುತ್ತದೆ.