ನಾವು ಪ್ರತಿ ನಿತ್ಯ ಮಲಗುತ್ತಿದ್ದ ಜಾಗ ಬದಲಿಸಿದ ವೇಳೆ ಅಥವಾ ಹೊಸ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾತ್ರಿ ಬಹು ಬೇಗ ನಿದ್ರೆ ಬರುವುದಿಲ್ಲ. ಒಂದು ವೇಳೆ ನಿದ್ರೆ ಹತ್ತಿದರೂ ಸ್ವಲ್ಪವೇ ಸದ್ದಾದರೂ ಎಚ್ಚರವಾಗಿ ಬಿಡುತ್ತದೆ. ಇದಕ್ಕೆ ಕಾರಣವೇನೆಂಬುದನ್ನು ತಜ್ಞರು ತಿಳಿಸಿದ್ದಾರೆ.
ಹೊಸ ಸ್ಥಳದಲ್ಲಿ ಮಲಗಿದ ಸಂದರ್ಭದಲ್ಲಿ ವ್ಯಕ್ತಿಗಳ ಮೆದುಳಿನ ಅರ್ಧ ಭಾಗ ಕಾರ್ಯ ನಿರ್ವಹಿಸುತ್ತಿರುವುದು ಅಧ್ಯಯನದ ವೇಳೆ ಕಂಡು ಬಂದಿದೆ. ಅದರಲ್ಲೂ ಮೆದುಳಿನ ಎಡ ಭಾಗ, ಬಲ ಭಾಗದ ಮೆದುಳಿಗಿಂತ ಹೆಚ್ಚು ಸಕ್ರಿಯರಾಗಿರುವುದು ತಿಳಿದು ಬಂದಿದೆ.
ಹೊಸ ಪರಿಸರಕ್ಕೆ ಹೋಗುತ್ತಿದ್ದಂತೆಯೇ ಮೆದುಳು ಹೆಚ್ಚು ಜಾಗ್ರತಾವಸ್ಥೆಯಲ್ಲಿರುತ್ತದೆ ಎನ್ನಲಾಗಿದ್ದು, ಈ ಕಾರಣಕ್ಕಾಗಿಯೇ ಆ ಸ್ಥಳಕ್ಕೆ ನಾವು ಅಭ್ಯಾಸವಾಗುವವರೆಗೂ ನಿದ್ರೆಯಿಂದ ವಂಚಿತರಾಗಬೇಕಾಗುತ್ತದೆ. ಅದೇ ಸ್ಥಳದಲ್ಲಿ ಮೂರ್ನಾಲ್ಕು ದಿನ ಕಳೆದ ಬಳಿಕ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಕಾರಣ ಸುಖ ನಿದ್ರೆ ಮಾಡಬಹುದು ಎಂಬ ಅಂಶ ಅಧ್ಯಯನದಲ್ಲಿ ಕಂಡು ಬಂದಿದೆ.