ಇನ್ಮುಂದೆ ಮೊಬೈಲ್ಗೆ ಕರೆ ಮಾಡಿದ್ರೆ, ಅವರ ನಿಜವಾದ ಹೆಸರು ನಿಮ್ಮ ಫೋನ್ನಲ್ಲಿ ಡಿಸ್ಪ್ಲೇ ಆಗುತ್ತೆ! ಹೌದು, ಜಿಯೋ, ಏರ್ಟೆಲ್ ಮತ್ತು ವಿಐ ಬಳಕೆದಾರರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಟೆಲಿಕಾಂ ಕಂಪನಿಗಳು ಹೊಸ ಫೀಚರ್ ಒಂದನ್ನು ತರಲು ಸಜ್ಜಾಗಿವೆ. ಇದರಿಂದ ಕರೆ ಮಾಡುವವರ ನಿಜವಾದ ಹೆಸರು ಫೋನ್ನಲ್ಲಿ ಕಾಣಿಸುತ್ತದೆ.
ಪ್ರತಿದಿನ ಬರುವ ಅಪರಿಚಿತ ಸಂಖ್ಯೆಯ ಕರೆಗಳಿಂದ ನಿಮಗೆ ಬೇಸರವಾಗಿದ್ದರೆ, ಈ ಸಮಸ್ಯೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ದೇಶದ ಮೂರು ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವಿಐ ತಮ್ಮ ಕೋಟ್ಯಂತರ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ತರಲಿವೆ.
ಈ ಫೀಚರ್ನ ಹೆಸರೇ ನ್ಯೂ ಕಾಲರ್ ನೇಮ್ ಪ್ರೆಸೆಂಟೇಶನ್ (ಸಿಎನ್ಎಪಿ). ಇದರ ಸಹಾಯದಿಂದ ಕರೆ ಮಾಡುವವರ ಹೆಸರನ್ನು ಬಳಕೆದಾರರು ತಿಳಿಯಲು ಸಾಧ್ಯವಾಗುತ್ತದೆ. ಜಿಯೋ, ಏರ್ಟೆಲ್ ಮತ್ತು ವಿಐನ ಸಿಎನ್ಎಪಿ ಫೀಚರ್ ದೇಶಾದ್ಯಂತ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ದೊಡ್ಡ ಪರಿಹಾರವನ್ನು ನೀಡಲಿದೆ.
ಟೆಲಿಕಾಂ ಕಂಪನಿಗಳ ಈ ಫೀಚರ್ನ ದೊಡ್ಡ ಪ್ರಯೋಜನವೆಂದರೆ, ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ಗುರುತಿಸಲು ಬಳಕೆದಾರರು ಯಾವುದೇ ಥರ್ಡ್ ಪಾರ್ಟಿ ಆ್ಯಪ್ಗಳ ಮೊರೆ ಹೋಗಬೇಕಾಗಿಲ್ಲ. ಇಲ್ಲಿಯವರೆಗೆ, ಟ್ರೂಕಾಲರ್ನಂತಹ ಆ್ಯಪ್ಗಳು ಕರೆ ಮಾಡುವವರ ಹೆಸರನ್ನು ತೋರಿಸುವ ಸೌಲಭ್ಯವನ್ನು ನೀಡುತ್ತಿದ್ದವು. ಆದರೆ, ಇನ್ಮುಂದೆ ಅವುಗಳನ್ನು ಡೌನ್ಲೋಡ್ ಮಾಡುವ ಅಗತ್ಯವಿರುವುದಿಲ್ಲ. ಟೆಲಿಕಾಂ ಕಂಪನಿಗಳು ಕೆಲವು ಮಾರಾಟಗಾರರೊಂದಿಗೆ ಪಾಲುದಾರಿಕೆ ಹೊಂದಿವೆ. ಈ ಮಾರಾಟಗಾರರು ಟೆಲಿಕಾಂ ಕಂಪನಿಗಳಿಗೆ ಸಾಫ್ಟ್ವೇರ್ ಮತ್ತು ಅಗತ್ಯವಾದ ಸರ್ವರ್ಗಳನ್ನು ಒದಗಿಸುತ್ತಾರೆ.
ಟೆಲಿಕಾಂ ಕಂಪನಿಗಳು ಡೆಲ್, ಎರಿಕ್ಸನ್, ಎಚ್ಪಿ ಮತ್ತು ನೋಕಿಯಾದೊಂದಿಗೆ ಪಾಲುದಾರಿಕೆ ಹೊಂದಿವೆ. ಸಿಎನ್ಎಪಿ ಎಂಬುದು ಕಾಲರ್ ಗುರುತಿಸುವಿಕೆಯನ್ನು ಸುಧಾರಿಸುವ ಉದ್ದೇಶವನ್ನು ಹೊಂದಿರುವ ಸೇವೆಯಾಗಿದೆ. ಈ ಸೇವೆಯನ್ನು ಹೊರತಂದ ನಂತರ, ಬಳಕೆದಾರರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದರೆ, ಟ್ರೂಕಾಲರ್ನಂತಹ ಯಾವುದೇ ಆ್ಯಪ್ಗಳಿಲ್ಲದೆ ಅವರ ಹೆಸರನ್ನು ಡಿಸ್ಪ್ಲೇಯಲ್ಲಿ ನೋಡಬಹುದು.
ಸಿಎನ್ಎಪಿ ಮೂಲಕ ತೋರಿಸಲಾದ ಹೆಸರು ಕರೆ ಮಾಡಿದವರ ಪರಿಶೀಲಿಸಿದ ಹೆಸರಾಗಿರುತ್ತದೆ. ಅಂದರೆ, ಸಿಮ್ ಕಾರ್ಡ್ ಯಾರ ಹೆಸರಿನಲ್ಲಿದೆಯೋ ಅದೇ ಹೆಸರು ಡಿಸ್ಪ್ಲೇ ಆಗುತ್ತದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಕಳೆದ ವರ್ಷದ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಸಿಎನ್ಎಪಿ ಪ್ರಾರಂಭಿಸುವ ಬಗ್ಗೆ ಮಾತನಾಡಿತ್ತು. ಆಗ ಟ್ರಾಯ್ ಈ ಫೀಚರ್ ಅನ್ನು ವಿವಿಧ ಹಂತಗಳಲ್ಲಿ ಹೊರತರಲಾಗುವುದು ಎಂದು ಹೇಳಿತ್ತು.
ಸ್ಪಾಮ್ ಮತ್ತು ವಂಚನೆ ಕರೆಗಳನ್ನು ನಿಯಂತ್ರಿಸಲು ಸಿಎನ್ಎಪಿ ಹೆಚ್ಚಿನ ಸಹಾಯ ಮಾಡುತ್ತದೆ. ಟೆಲಿಕಾಂ ಕಂಪನಿಗಳು ಸಿಎನ್ಎಪಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿವೆ. ಕಂಪನಿಗಳು ಇದಕ್ಕಾಗಿ ಅಗತ್ಯವಿರುವ ಉಪಕರಣಗಳಿಗೆ ಆರ್ಡರ್ ನೀಡಿವೆ. ಹಲವೆಡೆ ಕಂಪನಿಗಳು ಟ್ರಯಲ್ ಕೆಲಸವನ್ನೂ ಆರಂಭಿಸಿವೆ. ಪರೀಕ್ಷೆ ಮುಗಿದು ತಂತ್ರಜ್ಞಾನ ಸ್ಥಿರವಾದ ನಂತರ ದೇಶಾದ್ಯಂತ ಬಳಕೆದಾರರಿಗೆ ಹೊರತರಲಾಗುವುದು.