
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯ ಹೊಣೆ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳ ಹೆಗಲೇರಿದೆ. ಸಿಬಿಐನಲ್ಲಿ ಹೆಚ್ಚುವರಿ ನಿರ್ದೇಶಕರಾಗಿರುವ ಸಂಪತ್ ಮೀನಾ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಪಹುಜಾ ತನಿಖೆಯ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಸಂಪತ್ ಮೀನಾ, 2020ರ ಹತ್ರಾಸ್ ಅತ್ಯಾಚಾರ-ಕೊಲೆ ಕೇಸ್ ಮತ್ತು 2017ರ ಉನ್ನಾವೋ ಅತ್ಯಾಚಾರ ಪ್ರಕರಣದಂತಹ ಹೈ-ಪ್ರೊಫೈಲ್ ಪ್ರಕರಣಗಳನ್ನು ಮುನ್ನಡೆಸಿದ್ದಾರೆ.
ಸಂಪತ್ ಮೀನಾ ಅವರೊಂದಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಪಹುಜಾ ಕೂಡ ತನಿಖೆಗೆ ಕೈಜೋಡಿಸಲಿದ್ದಾರೆ. ಸೀಮಾ ಪಹುಜಾ ಸಹ ಹತ್ರಾಸ್ ಪ್ರಕರಣದ ತನಿಖಾ ತಂಡದ ಭಾಗವಾಗಿದ್ದರು.
ಜಾರ್ಖಂಡ್‌ನ 1994ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಮೀನಾ ಸದ್ಯ ಕೋಲ್ಕತ್ತಾ ಪ್ರಕರಣದ ತನಿಖಾ ತಂಡದ ನೇತೃತ್ವ ವಹಿಸಿದ್ದಾರೆ. 25 ಸದಸ್ಯರ ಸಿಬಿಐ ತಂಡ ಘಟನೆ ಕುರಿತಂತೆ ಸಂಪೂರ್ಣ ತನಿಖೆ ನಡೆಸಲಿದೆ. ತನಿಖಾ ತಂಡದ ಭಾಗವಾಗಿರುವ ಸೀಮಾ ಪಹುಜಾ ಕೂಡ ದಕ್ಷ ಅಧಿಕಾರಿಗಳಲ್ಲೊಬ್ಬರು. 2007 ರಿಂದ 2018ರ ನಡುವೆ ಅತ್ಯುತ್ತಮ ತನಿಖೆಗಾಗಿ ಎರಡು ಬಾರಿ ಚಿನ್ನದ ಪದಕ ಪಡೆದಿದ್ದಾರೆ. ಕೌಟುಂಬಿಕ ಜವಾಬ್ದಾರಿಯಿಂದಾಗಿ ಒಮ್ಮೆ ಸ್ವಯಂ ನಿವೃತ್ತಿ ಪಡೆಯಲು ಸಹ ಇವರು ಬಯಸಿದ್ದರು. ಆದರೆ ಆಗಿನ ಸಿಬಿಐ ನಿರ್ದೇಶಕರು ಅವರ ಮನವೊಲಿಸಿ, ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ್ದರು.
ಕೆಲ ವರ್ಷಗಳ ಹಿಂದಷ್ಟೆ ಹಿಮಾಚಲ ಪ್ರದೇಶದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸೀಮಾ ಬೇಧಿಸಿದ್ದರು. ಹಲವಾರು ತಿರುವುಗಳನ್ನು ಕಂಡ ಈ ಪ್ರಕರಣ 2017 ರಲ್ಲಿ ಹಿಮಾಚಲ ಪ್ರದೇಶದಾದ್ಯಂತ ಆಕ್ರೋಶ ಹುಟ್ಟುಹಾಕಿತ್ತು. 2017ರ ಜುಲೈ 4ರಂದು ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಶಿಮ್ಲಾದ ಕೋಟ್‌ಖಾಯ್‌ನ ಕಾಡಿನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಹೈಕೋರ್ಟ್ ಸಿಬಿಐಗೆ ವಹಿಸಿತ್ತು. ಈ ಪ್ರಕರಣದಲ್ಲಿ ಕಾಡಿನಲ್ಲಿ ಮರಕಡಿಯುವವರನ್ನು ತಪ್ಪಿತಸ್ಥರೆಂದು ಗುರುತಿಸಲಾಯಿತು ಮತ್ತು 2021ರಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಇನ್ನು ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಕೂಡ ದೇಶಾದ್ಯಂತ ಸಂಚಲನ ಉಂಟುಮಾಡಿತ್ತು. ಹತ್ರಾಸ್‌ನಲ್ಲಿ 19 ವರ್ಷದ ದಲಿತ ಮಹಿಳೆಯ ಮೇಲೆ ನಾಲ್ವರು ಮೇಲ್ಜಾತಿ ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪವಿತ್ತು. ಮಹಿಳೆ ಎರಡು ವಾರಗಳ ನಂತರ ನವದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಕುಟುಂಬದ ಒಪ್ಪಿಗೆ ಅಥವಾ ಉಪಸ್ಥಿತಿಯಿಲ್ಲದೆ ಮಹಿಳೆಯ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ನಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಅದೇ ರೀತಿ 2017ರ ಉನ್ನಾವೋ ಅತ್ಯಾಚಾರ ಪ್ರಕರಣ ಕೂಡ ದೇಶವನ್ನು ಬೆಚ್ಚಿಬೀಳಿಸಿದ್ದು ಸುಳ್ಳಲ್ಲ. ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್, ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ. ಇಂತಹ ಸೂಕ್ಷ್ಮ ಪ್ರಕರಣಗಳನ್ನೆಲ್ಲ ನಿಭಾಯಿಸಿರುವ ಹಿರಿಯ ಸಿಬಿಐ ಅಧಿಕಾರಿಗಳಿಬ್ಬರೂ ಕೋಲ್ಕತ್ತಾ ವೈದ್ಯೆಯ ಪ್ರಕರಣದಲ್ಲಿ ಕೂಡ ಅಪರಾಧಿಗೆ ತಕ್ಕ ಶಿಕ್ಷೆಯಾಗುವಂತೆ ಪ್ರಕರಣದ ತನಿಖೆ ನಡೆಸಿವ ನಿರೀಕ್ಷೆಯಿದೆ.